ಬುಧವಾರ, ಅಕ್ಟೋಬರ್ 14, 2020

‘ವಿದ್ಯಾಗಮ’ ಯೋಜನೆಯನ್ನು ಸ್ಥಗಿತ ಗೊಳಿಸುವುದು ಸಮಂಜಸ ಅಲ್ಲ

ವಿದ್ಯಾಗಮ ಯೋಜನೆ ಆರಂಭವಾದ ನಂತರ ಶಿಕ್ಷಕರು ಮತ್ತು ವಿದ್ಯಾರ್ಥಿಗಳಲ್ಲಿ ಕೋವಿಡ್-19 ಪಾಸಿಟಿವ್ ಮತ್ತು ಸಾವು ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಒಡ್ಡಿ ಯೋಜನೆಯನ್ನು ಸ್ಥಗಿತ ಮಾಡಲು ಮಾಧ್ಯಮಗಳ ಜೊತೆ ಕೆಲವು ವಿರೋಧ ಪಕ್ಷದ ಮುಖಂಡರುಗಳು ಸರ್ಕಾರದ ಮೇಲೆ ಒತ್ತಡ ತಂದೂ ಅಂತೂ ಸ್ಥಗಿತ ಗೊಂಡಿದೆ . ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂಬುದು ಸರ್ಕಾರದ ಉವಾಚ . ನಿಜಕ್ಕೂ ಸಧ್ಯದ ಪರಿಸ್ಥಿತಿಗೆ ಇದು ಯೋಗ್ಯವಾಗಿದೆ., ಆದರೆ ಇದನ್ನು ಸಂಪೂರ್ಣವಾಗಿ ಸ್ಥಗಿತ ಗೊಳಿಸಬಾರದು ಒಂದಷ್ಟು ಮಾರ್ಪಾಡುಗಳನ್ನು ಮಾಡಿ ಪುನಃ ಪ್ರಾರಂಭಿಸಬೇಕು. ಉತ್ತಮ ಯೋಜನೆಗಳಲ್ಲಿ ಒಂದಾದ ಶಾಲಾ ಮಕ್ಕಳಿಗೆ ಸುರಕ್ಷಿತ ಕ್ರಮಗಳೊಂದಿಗೆ ಕಲಿಕೆಯನ್ನು ಮುಂದುವರೆಸುವ ‘ವಿದ್ಯಾಗಮ’ಯೋಜನೆಯು ಬಡ ,ಮಾಧ್ಯಮ ಹಾಗೂ ಗ್ರಾಮೀಣ ವಿದ್ಯಾರ್ಥಿಗಳಿಗೆ ವರದಾನವಾಗಿದೆ. ಮಕ್ಕಳ ಸುರಕ್ಷತೆಗೆ ಹಾಗೂ ವಿದ್ಯಾರ್ಜನೆಗೆ ಇದು ಅನುಕೂಲವಾಗಿತ್ತು . ಏನೀದು ವಿದ್ಯಾಗಮ ಯೋಜನೆ : ತಿರಸ್ಕರಿಸುವ ಮೊದಲು ಯೋಜನೆ ಬಗ್ಗೆ ಅರಿಯಬೇಕಾಗಿದೆ . ಶಾಲೆಗಳು ಪ್ರಾರಂಭವಾಗುವವರೆಗೂ ವಿದ್ಯಾರ್ಥಿಗಳು ವಿದ್ಯೆ ಕಲಿಕೆಯಿಂದ ದೂರವಾಗ ಬಾರದೆನ್ನುವ ಕಾರಣಕ್ಕೆ ವಿದ್ಯಾಗಮ ಯೋಜನೆ ಜಾರಿ ಮಾಡಲಾಗಿತ್ತು. ಗ್ರಾಮೀಣ ಪ್ರದೇಶದ, ನಗರ ಪ್ರದೇಶದ ಸರ್ಕಾರಿ ಮಕ್ಕಳನ್ನ ಗಮನದಲ್ಲಿಟ್ಟುಕೊಂಡು ಸರ್ಕಾರ ಈ ಯೋಜನೆಯನ್ನು ಜಾರಿ ಮಾಡಿತ್ತು. ರಾಜ್ಯ ಸರ್ಕಾರವು ಆಗಸ್ಟ್ 4ರಂದು ಅಧಿಕೃತ ಆದೇಶ ಜಾರಿಗೆ ತಂದಿತ್ತು. ಸುಮಾರು 47 ಲಕ್ಷ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿದೆ ಎಂಬುದು ಸರ್ಕಾರದ ಯೋಚನಾ ಯೋಜನೆ ಆಗಿತ್ತು . ಅಂತೆಯೇ ವಿದ್ಯಾಗಮ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳನ್ನ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗದಂತೆ ಮಕ್ಕಳಿರುವ ಜಾಗಕ್ಕೆ ಹೋಗಿ ಶಿಕ್ಷಕರು ಪಾಠ ಮಾಡಬೇಕು. ಒಂದೇ ಊರಿನ ಒಂದೇ ತರಗತಿಯ ವಿದ್ಯಾರ್ಥಿಗಳ ಗುಂಪು ಮಾಡಿ . ಗ್ರಾಮದ ದೇವಸ್ಥಾನ, ಸಮುದಾಯ ಭವನ, ಖಾಲಿ ಮನೆ ಹೀಗೆ ಪಾಠ ಮಾಡಲು ಸೂಕ್ತವಾದ ಶುಚಿತ್ವ ಸ್ಥಳದಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡಬೇಕು ಎಂಬುದಾಗಿತ್ತು . ಶಿಕ್ಷಕರು-ಮಕ್ಕಳ ನಿರಂತರ ಸಂಪರ್ಕ, ಮಕ್ಕಳಲ್ಲಿ ಮಾರ್ಗದರ್ಶಿತ ಸ್ವಯಂ ಕಲಿಕೆ, ಶಿಕ್ಷಕರ ಮೂಲಕ ಮಕ್ಕಳ ಮನೋಸ್ಥೈರ್ಯದ ವೃದ್ಧಿ, ಶಾಲೆಯಿಂದ ಮಕ್ಕಳು ಹೊರಗುಳಿಯದಂತೆ ಖಾತ್ರಿ, ಶಿಕ್ಷಕರು, ಶಾಲಾ ಮೇಲುಸ್ತುವಾರಿ ಸಮಿತಿಯ ಸದಸ್ಯರು, ಆಡಳಿತ ಮಂಡಳಿಯವರು, ಸ್ವಯಂ ಸೇವಕರು, ಪೋಷಕರು ಹಾಗೂ ಸಮುದಾಯದ ಎಲ್ಲಾ ಭಾಗೀದಾರ ಸಕ್ರಿಯ ತೊಡಗಿಸುವಿಕೆಯಂತಹ ಸದುದ್ದೇಶದ ಕಾರ್ಯಕ್ರಮವೇ ವಿದ್ಯಾಗಮ .
ವಿದ್ಯಾರ್ಥಿಗಳಿಗೆ ಅದೆಷ್ಟು ಉಪಕಾರ : ಉಳ್ಳವರಿಗೆ ಅದೆಷ್ಟೋ ಅವಕಾಶ ಲಭಿಸುತ್ತಿದೆ ಆದರೆ ಇಲ್ಲದವರ ಪಾಡು ಹೇಳತೀರದು ನಗರ ವಾಸಿಗಳಿಗೆ ಅಂತರ್ಜಾಲ ಶಿಕ್ಷಣ ಲಭಿಸುತ್ತದೆ ಕಂಪ್ಯೂಟರ್ ,ಮೊಬೈಲ್ ಬಳಕೆಗೆ ಆರ್ಥಿಕ ಸ್ಥಿತಿ ಹೊಂದಿಕೆ ಯಾಗುವುದರಿಂದ ಯಾವುದೇ ತೊಂದರೆ ಇರದು . ಇನ್ನೂ ಒಂದಷ್ಟು ಖರ್ಚು ಮಾಡಿ ಟೂಷನ್ ಕೊಡಲು ತರಬೇತಿದಾರರನ್ನು ಮನೆಗೆ ಕರೆಯಿಸಿ ಕೊಳ್ಳುವ ಪರಿಪಾಠ,ಅವಕಾಶ ಇದೆ . ಆದರೆ ಗ್ರಾಮೀಣ ಪರಿಸರದಲ್ಲಿನ ವಿದ್ಯಾರ್ಥಿಗಳ ಸ್ಥಿತಿ ಶೋಚನೀಯ. ಅಂತರ್ಜಾಲವಂತೂ ಇಲ್ಲ ಕಂಪ್ಯೂಟರ್ ,ಮೊಬೈಲ್ ಇಲ್ಲವೇ ಇಲ್ಲ . ಇನ್ನಿತರ ಸೌಲಭ್ಯ ದೂರದ ಮಾತು . ಒಂದು ಹೊತ್ತಿನ ತುತ್ತಿಗಾಗಿ ಕೂಲಿ ನಾಲಿ ಮಾಡಿ ಮುಂಜಾನೆ ಮನೆ ಬಿಟ್ಟರೆ ಮುಸ್ಸಂಜೆ ಮನೆ ಸೇರುವ ಪಾಲಕರ ಪೋಷಕರಿಗೆ ಭಯ ಆವರಿಸರುತ್ತೆ ಮಕ್ಕಳು ಏನು ಮಾಡ್ತಾವೋ ಹೇಗೆ ಇದ್ದವೂ ಎಂಬುದು. ಇರುವಲ್ಲಿ ಇರದ ವಯಸ್ಸಿನ ಸಹಜ ಗುಣಕ್ಕೆ ಕಡಿವಾಣ ಹಾಕಲು ಮನೆಯಲ್ಲಿ ಯಾರು ಇಲ್ಲ ಇತ್ತ ಶಾಲೆ ಇಲ್ಲಾ. ಈ ಎಲ್ಲ ಆತಂಕ ಪಾಲಕರಲ್ಲಿ ಇದ್ದೇ ಇರುತ್ತವೆ . ಈ ಯೋಜನೆ ಪ್ರಕಾರ ಒಂದಷ್ಟು ವಿದ್ಯಾರ್ಜನೆ ಜೊತೆಗೆ ಸುರಕ್ಷತೆಯೂ ಕಾಪಾಡುತ್ತವೆ. ವಿದ್ಯಾಗಮ ಯೋಜನೆಯ ಉದ್ದೇಶವೇ ಹೀಗಿದೆ ಗ್ರಾಮ, ನಗರ, ಪಟ್ಟಣ, ಗುಡ್ಡಗಾಡು, ಹಳ್ಳಿಗಾಡು ಪ್ರದೇಶ, ಬೆಟ್ಟ, ಅರಣ್ಯದಂಚಿನ ಗ್ರಾಮಗಳ ಮಕ್ಕಳಿಗೆ ಟಿವಿ, ಮೊಬೈಲ್ ಸೌಲಭ್ಯವೂ ಕಷ್ಟ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುವ ಅದರಲ್ಲೂ, ಗ್ರಾಮೀಣ ಮಕ್ಕಳಿಗೆ ಅತೀ ಮುಖ್ಯವಾದ ಯೋಜನೆ . ಎಲ್ಲೆಡೆ, ಎಲ್ಲರಿಗೂ ಶಿಕ್ಷಣ ಬೇಕೆಂಬ ನೀತಿಗೆ ಇದು ಉತ್ತಮ ವಾಗಿದೆ . ಕರೋನ ಕಾಲದಲ್ಲಿ 10 ನೇ ತರಗತಿ ಪರೀಕ್ಷೆ ನೆಡೆಸಿ ದೇಶಕ್ಕೆ ಮಾದರಿಯಾದ ನಮ್ಮ ರಾಜ್ಯಕ್ಕೆ ಇದೊಂದು ಸಾಹಸ ಗಾಥೆಯ ಗರಿಯೂ ಹೌದು. 150ಕ್ಕೂ ಅಧಿಕ ಶಿಕ್ಷಕರು ಕೋವಿಡ್ ಗೆ ತುತ್ತಾಗಿ ಪ್ರಾಣ ತ್ಯಾಗ ಮಾಡಿದ್ದರೆಂಬ ಮಾಧ್ಯಮ ಸಮೀಕ್ಷೆಯಲ್ಲಿ ಎಷ್ಟು ಹುರುಳಿದೆಯೋ ಗೊತ್ತಿಲ್ಲ ,ಆದರೆ ಕರೋನ ಕಾಲ ಘಟ್ಟದಲ್ಲಿ ಇಡೀ ಜಗತ್ತೇ ಸಂಕಷ್ಟ ಎದುರಿಸುತ್ತಿದೆ ಇದೀಗ ಅದೇ ದೈನಂದಿನ ಜೀವನಕ್ಕೆ ಒಗ್ಗಿ ಕೊಳ್ಳಲೇ ಬೇಕಾಗಿದೆ . ಸಿನಿಮಾ ,ಶಾಲೆ ಬಿಟ್ಟರೆ ಮತ್ತೆಲ್ಲಾ ಸಾಮನ್ಯ ಪರಿಸ್ಥಿತಿಗೆ ಬಂದಿದೆ . ಹಾಗಂತ ಸುರಕ್ಷತೆಯನ್ನು ಮೈ ಗೂಡಿಸದೇ ಇರುವುದು ಸರಿಯಲ್ಲ ಅವಶ್ಯಕ ಸುರಕ್ಷತೆ ಬೇಕು. ಆ ಸುರಕ್ಷತೆಯನ್ನು ಪಾಲಿಸಿದರೇ ವಿದ್ಯಾಗಮ ಯೋಜನೆ ಸಕ್ಸಸ್ ಕಾಣುವುದರಲ್ಲಿ ಎರಡು ಮಾತಿಲ್ಲ. ಮಕ್ಕಳ ಕಲಿಕೆ ನಿರಂತರ ಆಗಿರುವಂತೆ ನೋಡಿಕೊಳ್ಳುವುದಕ್ಕಾಗಿ ಎಂ.ಕೆ. ಶ್ರೀಧರ್ ನೇತೃತ್ವದ ಸಮಿತಿ ವರದಿ ಆಧಾರದಲ್ಲಿ ವಿದ್ಯಾಗಮ ಯೋಜನೆ ಅನುಷ್ಠಾನ ಬಂದ ರಾಜ್ಯಾದ್ಯಂತ ಒಟ್ಟು ಸರಿ ಸುಮಾರು ಐವತ್ತು ಲಕ್ಷಕ್ಕೂ ಹೆಚ್ಚು ಸರ್ಕಾರಿ ಶಾಲಾ ಮಕ್ಕಳು ‘ವಿದ್ಯಾಗಮ’ದ ಪ್ರಯೋಜನವನ್ನು ಪಡೆಯುವಂತಾಗಿದ್ದು ಸಂತೋಷದ ವಿಚಾರ .ಶಿಕ್ಷಕ ವೃತ್ತಿ ಎಂದರೆ ಅದು ಸಾಮಾಜಿಕ ಸೇವೆಯೂ ಹೌದು , ಜವಾಬ್ದಾರಿಯೂ ಹೌದು. ಸಮರ್ಥವಾಗಿ ಸುರಕ್ಷತೆ ಯೊಂದಿಗೆ ನಿರ್ವಹಿಸಿದರೇ ಸಾವು -ನೋವುಗಳಿಲ್ಲದೇ ಯೋಜನೆ ಯನ್ನು ಪೂರ್ಣಗೊಳಿಸಿ ವಿದ್ಯಾರ್ಥಿಗಳ ಭವ್ಯ ಭಾವಿಷ್ಯಕ್ಕೇ ಮುನ್ನುಡಿ ಬರೆಯಬೇಕು ಸುರಕ್ಷತೆ ಹೇಗಿದ್ದರೆ ಚೆನ್ನಾ :ವಿದ್ಯಾಗಮಕ್ಕೆ ತೆರಳುವ ಶಿಕ್ಷಕರಿಗೆ/ವಿದ್ಯಾರ್ಥಿಗಳಿಗೆ ಆಗಾಗ ಉಚಿತ ಕೊರೊನಾ ತಪಾಸಣೆ ಸೌಲಭ್ಯ ಜೊತೆಗೆ ವೈದ್ಯಕೀಯ ವ್ಯವಸ್ಥೆ ಜಾರಿಯಾಗಬೇಕು . ಸಮುದಾಯ ಭವನ ಅಥವಾ ವಿದ್ಯಾರ್ಥಿಗಳ ಸಾಮಾಜಿಕ ಅಂತರ ಕಾಪಾಡುವಲ್ಲಿ ಸೂಕ್ತ ವೇದಿಕೆ,ವಿಶಾಲ ಸ್ಥಳ ಕಲ್ಪಿಸಬೇಕು,ಶುಚಿತ್ವ ಕಡೆ ಗಮನ ವಹಿಸಿ , ಶಿಕ್ಷಕರಿಗೆ, ಪೋಷಕರಿಗೆ ಧೈರ್ಯ ತುಂಬುವಂತ ಕೆಲಸವಾಗಬೇಕು .ಆಯಾಯ ಗ್ರಾಮದವರು ತುಂಬು ಹೃದಯ ದಿಂದ ಪ್ರೋತ್ಸಾಹಿಸಬೇಕು. ಇಂತಹ ಸಣ್ಣ ಪುಟ್ಟ ಮಾರ್ಪಾಡು ಅವಶ್ಯಕತೆ ಬಿಟ್ಟರೇ, ಧೈರ್ಯ ಒಂದೇ ಸಾಧನ .