ಸೋಮವಾರ, ನವೆಂಬರ್ 24, 2025

ಇದಕ್ಕೆ ಮಟ್ಟ ಹಾಕುವವರು ಯಾರು ??

ಇದೇ ನವೆಂಬರ್ ತಿಂಗಳಲ್ಲಿ ಎರಡು ಅತೀ ದೊಡ್ಡ ದೇಶ ದ್ರೋಹಿ ಘಟನೆ ನಮ್ಮ ದೇಶದಲ್ಲಿ ನಡೆಯಿತು. ಒಂದು ನಮ್ಮ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ನಡೆದರೇ ಇನ್ನೊಂದು ದೇಶದ ರಾಜಧಾನಿ ದೆಹಲಿಯಲ್ಲಿ ನಡೆದು ಹೋಯಿತು. ಆಗಾಗ ಬೆಳಕಿಗೆ ಬಂದು ಸದ್ದು ಮಾಡಿ ಸುದ್ದಿಯಾಗಿ ಸೈಡ್ ಗೆ ಸರಿಯುವ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿನರುವ ಖೈದಿಗಳಿಗೆ ರಾಜಾತಿಥ್ಯ! ಈ ಬಾರಿ ಇನ್ನು ಹೊಸತಾಗಿಯೇ ನವನವೀನ ರೀತಿಯಲ್ಲಿ ಪ್ರಸಾರಕ್ಕೆ ಬಂತು.ಕೈದಿಗಳ ಎಣ್ಣೆ ಪಾರ್ಟಿ ಡಾನ್ಸ್ ,ಪಾತಕಿಗಳ ಕೈಯಲ್ಲಿ ಸ್ಮಾರ್ಟ್‌ ಫೋನ್‌,ಟಿವಿ ,ಉಗ್ರ ಗ್ರಾಮಿ ಜುಹಾದ್ ಹಮೀದ್ ಶಕೀಲ್ ಮನ್ನಾ ,ವಿಕ್ರತ ಕಾಮಿ ಉಮೇಶ್ ರೆಡ್ಡಿಗಳ ರಾಜ ಭೋಗ ವೈಭವಗಳ ಚಿತ್ರಣ ವೈರಲ್ ಆದವು. ಇದು ಕ್ಯಾಮರಾದ ಕಣ್ಣಿಗೆ ಸಿಕ್ಕ ಕೆಲವು ಸ್ಯಾಂಪಲ್ ಉದಾಹರಣೆಗಳಾದರೇ, ಇನ್ನು ತೆರೆ ಮರೆಯಲ್ಲಿ ಅದೆಷ್ಟೋ ಆ ದೇವರೇ ಬಲ್ಲ !ಇವರುಗಳು ಕೈದಿಗಳೋ ಎಂಬುದೇ ಅರ್ಥವಾಗದ ಪ್ರಶ್ನೆ! ಜೈಲಿಗೆ ಬಂದು ಶಿಕ್ಷೆ ಅನುಭವಿಸ ಬೇಕಾದ ಆರೋಪಿಗಳು ಇಲ್ಲಿ ರಾಜಾಥಿತ್ಯವನ್ನು ಪಡೆಯುತ್ತಿದ್ದಾರೆ.ನಿಜಕ್ಕೂ ಈ ಪರಿಯ ಎಂಜೋಯ್ಮೆಂಟ್ ಅವರ ಮನೆಯಲ್ಲಿ ಅಥವಾ ಇನ್ಯಾವುದೋ ಪಾರ್ಟಿಯಲ್ಲಿ ಸಿಗಲಿಕ್ಕೆ ಇಲ್ಲವೇನೋ ಅಂತ ಮಜಾ,ಮೋಜು ,ಮಸ್ತಿ ಮನೋರಂಜನೆ ಜೈಲಿನಲ್ಲಿ ಸಿಗುತ್ತಿದೆ! ಇದನ್ನೆಲ್ಲಾ ಕಂಡೇ ಪ್ರಸ್ತುತ ಅಪರಾಧ ಜಗತ್ತು ಬೆಳೆಯುತ್ತಿರುವುದು, ಆರೋಪಿಗಳಿಗೆ ಶಿಕ್ಷೆ ನೀಡುವ ಬದಲು ಮಜಾ ಉಡಾಯಿಸುವ ಅಡ್ಡಗಳಾಗುತ್ತಿರುವ ಇಂತಹ ಉಚ್ಚ ಸ್ಥಿತಿಯ ಜೈಲ್ ಗಳ ಸ್ಥಿತಿ ಇಂತಿದ್ದರೇ ಇನ್ನುಳಿದವೋ ?? ಹೀಗಾಗಿಯೇ ಅಪರಾಧಗಳು ಹೆಚ್ಚುತ್ತಿವೆ ಪಾತಕಿಗಳು ಸಲೀಸ್ ಆಗಿ ಎಂಟ್ರಿ ಕೊಡುತ್ತಾರೆ.
ಇದಕ್ಕೆ ಹೊಣೆ ಯಾರು ? ನಮ್ಮ ವ್ಯವಸ್ಥೆ ಅಲ್ಲದೆ ಮತ್ತಿನ್ನೇನು ? ಈ ವ್ಯವಸ್ಥೆಗಳು ಲೀಲಾಜಾಲವಾಗಿ ಜರುಗುತ್ತಿದೆ ಅಂದ್ರೆ ಜೈಲ್ ಅಧಿಕಾರಿಗಳ ಪಾತ್ರವಲ್ಲದೆ ಮತ್ತಿನ್ನೇನು ?ಕೇವಲ ಹಣದ ದಾಹಕ್ಕೆ ಬಲಿಯಾಗೆ ಇಂತ ಕ್ರಿಮಿನಲ್ ಗಳಿಗೆ ಸಪೋರ್ಟ್ ಮಾಡುವ ಅಧಿಕಾರಿಗಳೇ ದೊಡ್ಡ ಕ್ರಿಮಿನಲ್ ಗಳು ಈ ಕ್ರಿಮಿಗಳನ್ನು ಕಿತ್ತು ಹೊಸಕಿ ಹಾಕುವವರು ಯಾರು ? ಗೊತ್ತಿಲ್ಲ !!ಗ್ರಹ ಮಂತ್ರಿಗಳದ್ದು ಅದೇ ಡೈಲಾಗ್ ವಿಚಾರಣೆ ಮಾಡುತ್ತೇವೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ,ಜನಾಕ್ರೋಶ ಹೆಚ್ಚಾದ ಕೂಡಲೇ ತಪ್ಪಿತಸ್ಥರನ್ನು ಒಂದಷ್ಟು ದಿನ ಸಸ್ಪೆಂಡ್ ಮಾಡಿ ಮತ್ತೆ ಬೇರೆ ಕಡೆ ಟ್ರಾನ್ಸ್ಫರ್ ಮಾಡಿ ಕೊಳ್ಳುದು ಬಿಟ್ಟರೇ ಬೇರೇನೂ ಇಲ್ಲ , ಅವರನ್ನು ಡಿಸ್ಮಿಸ್ ಮಾಡುವ ಯೋಗ್ಯತೆ ಅಥವಾ ಪವರ್ ನಮ್ಮಲ್ಲಿ ಇಲ್ಲವೇ ? ಅದಕ್ಕಾಗಿ ಈ ಪರಿಯಲ್ಲಿ ಈ ಘಟನೆಗಳು ಆಗಾಗ ಮರುಕಳಿಸುತ್ತಿರವುದು. ಜನರು ದಂಗೆ ಏಳಬೇಕಾಗಿದೆ ಅಷ್ಟೇ ಇದಕ್ಕಿರುವ ಉಪಾಯ . ಇದಕ್ಕೆ ಹೊಂದಿಕೆ ಯಾಗುವ ಇನ್ನೊಂದು ಘಟನೆ ನಡೆಯಿತು. ಅದು 10ನೇ ತಾರೀಕು ,ನವೆಂಬರ್ 2025, ಸರಿಸುಮಾರು ಸಂಜೆ 6:52ರ ಸಮಯ. ಸ್ಥಳ ದೆಹಲಿಯ ರೆಡ್ ಫೋರ್ಟ್ ಸಮೀಪ, Metro Gate No.1 ಬಳಿ ಹೈಂಡೈ i20 ಕಾರಿನಲ್ಲಿ ಸ್ಫೋಟ. ಅದು ಕಾರಿನಲ್ಲಿ ಆಕಸ್ಮಿಕವಾಗಿ ತಾಂತ್ರಿಕ ದೋಷದಿಂದ ಉಂಟಾದ ಸ್ಪೋಟವಲ್ಲ ಅದರ ಒಳಗಡೆ ತುಂಬಿತ್ತು ಬಾಂಬ್ !ಆತ್ಮಹತ್ಯೆ ದಾಳಿ. ಅದರ ಒಳಗಿದ್ದ ಚಾಲಕನಾಗಿ ಉಗ್ರ, ಡಾಕ್ಟರ್ ಪದವಿ ಪಡೆದ ಉಮರ್ ನಬಿ ಎಂಬ ದೇಶ ದ್ರೋಹಿ.ಸ್ಪೋಟದ ತೀವೃತೆ ಎಷ್ಟು ಇತ್ತೆಂದರೆ 8 ಮಂದಿ ಸಾವಿಗೀಡಾಗಿದ್ದರು ೨೦ ಕ್ಕೂ ಅಧಿಕ ಬಂದಿ ಗಂಭೀರ ಸ್ಥಿತಿಗೆ ತಲುಪಿದ್ದರು. ಸ್ಥಳದಲ್ಲಿದ್ದ ಇತರ ವಾಹನಗಳೂ ಸೇರಿದಂತೆ ಅಕ್ಕ ಪಕ್ಕದ ಹಲವಾರು ಸಂಪತ್ತುಗಳು ನಷ್ಟವಾದವು.ನಾಶ ಗೊಂಡವು.
ಇದು ಭಯೋತ್ಪಾದಕ ದಾಳಿ ಎಂಬುದನ್ನು ಒತ್ತಿ ಹೇಳಬೇಕಿಗಿಲ್ಲ.ಇದನ್ನು ಉಗ್ರರಲ್ಲದೇ ಬೇರೆ ಯಾರೂ ಮಾಡಲು ಸಾಧ್ಯವಿಲ್ಲ.ಇದು ದೇಶದ ಅನ್ನ ತಿಂದ ರಕ್ತ ಪಿಪಾಸುಗಳ ಸಂಚಿನ ಕ್ರತ್ಯ.ದೇಶದ ಹೊರಗಿನ ಉಗ್ರರನ್ನು ಹೇಗೋ ಸದೆಬಡಿಯಬಹುದು ಆದ್ರೆ ಇಲ್ಲಿನ ಅನ್ನ ತಿಂದು ಜಲ ನೆಲದ ಋಣವನ್ನು ಮರೆತ ಪಾತಾಕಿಗಳನ್ನು ಪತ್ತೆಹಚ್ಚುವುದು ಹರ ಸಾಹಸ.ಇದೇನೂ ಹೊಸತಲ್ಲ ಆಗಾಗ ಶತ್ರು ರಾಷ್ಟ್ರಗಳಿಗಿಂತ ನಮ್ಮವರೇ ನಮಗೆ ದ್ರೋಹ ಬಗೆಯವ ಕೆಲಸವನ್ನು ಕಂಡಿರುತ್ತೇವೆ . ದೇಶದಲ್ಲಿನ ಒಂದೊಳ್ಳೆ ಆಡಳಿತ ಚುಕ್ಕಾಣಿ ಬಂದ ಪರಿಣಾಮ ಸುಮಾರು ಸಮಯವೇ ಕಳೆದಿದೆ ಈ ತರಹದ ಅಹಿತಕರ ಘಟನೆ ನಡೆಯದೇ.ಅಂತೂ ಮೊನ್ನೆ ಮೊನ್ನೇ ಬಾಂಬ್ ಸ್ಫೋಟ ಗೊಂಡೇ ಬಿಟ್ಟಿತು.ಇದನ್ನು ಮಟ್ಟ ಹಾಕುವುದು ಹೇಗೆ ಮಿಲಿಯನ್ ಡಾಲರ್ ಪ್ರಶ್ನೆ !

ಮಂಗಳವಾರ, ನವೆಂಬರ್ 4, 2025

ದರ್ಶನ್ ನ ಬೆಂಬಿಡದ ಕಾನೂನು ಕುಣಿಕೆ !

ರೇಣುಕಾ ಸ್ವಾಮಿಯ ಭೀಕರ ಕೊಲೆಗೆ ಸಂಬಂಧ ಪಟ್ಟಂತೆ ಸುಮಾರು ಒಂದೂವರೆ ವರ್ಷ ಕಳೆಯುತ್ತಾ ಬಂತು ಚಾಲೇಂಗಿಂಗ್ ಸ್ಟಾರ್ ಡಿ ಬಾಸ್ ಖ್ಯಾತಿಯ ದರ್ಶನ್ ತೂಗುದೀಪ್ ಸೆರೆ ಮನೆ ಸೇರಿ .ಇನ್ನೂ ಬಿಡುಗಡೆ ಭಾಗ್ಯ ಕೂಡಿ ಬಂದಿಲ್ಲ ಅಷ್ಟಕ್ಕೂ ಹಾಗೆ ಬಿಡುಗಡೆ ಹೊಂದಲಿಕ್ಕೆ ದರ್ಶನ್ ಅಂಡ್ ಗ್ಯಾಂಗ್ ಮಾಡಿದ ಕ್ರತ್ಯ ಸಣ್ಣದಲ್ಲ. ಕಾನೂನಿನ ಮೇಲೆ ಗೌರವ ಇಮ್ಮಡಿಯಾಗುತ್ತಿದೆ ! ಉಳ್ಳವರ ಕಪಿ ಮುಷ್ಠಿಯಲ್ಲಿ ಕಾನೂನು ಬಂಧಿಯಾಗಿರುತ್ತದೆ ಎನ್ನುವುದನ್ನು ತಳ್ಳಿ ಹಾಕಿದ್ದು ಈ ದರ್ಶನ್ ಕೇಸ್ ! ಕಾನೂನು ಎಲ್ಲರಿಗೂ ಒಂದೇ ಕಾನೂನು ಕಾಯ್ದೆಯನ್ನು ಕೈ ತೆಗೆದು ಕೊಳ್ಳುವ ,ಅದನ್ನು ತಮಗೆ ಇಷ್ಟ ಪಟ್ಟಂತೆ ಬಳಿಸಿ ಕೊಳ್ಳುವವರ ನೈಜ ಉದಾರಹಣೆಗಳ ಮಧ್ಯೆ ಇದೊಂದು ದಿಫ್ಫ್ರೆಂಟ್ ಆಗಿ ಕಾಣ ಸಿಕ್ಕಿದ್ದು ಸುಳ್ಳಲ್ಲ. ಅಪರೂಪದ ಘಟನೆ ! ಸಿನಿಮಾ ಹೀರೊ ಆಗಿ ಮೆಜೆಸ್ಟಕ್ ಸಿನಿಮಾದ ಮೂಲಕ ತೆರೆಯ ಮೇಲೆ ಪರಿಚಯಗೊಂಡ ದರ್ಶನ್ ತೂಗುದೀಪ್ ಸಾಕಷ್ಟು ಫಿಲಂಗಳು ಹಿಟ್ ಮೇಲೆ ಹಿಟ್ ಕೊಟ್ಟು ಸ್ಯಾಂಡಲ್ವೋಡ್ ಸಿನಿ ಅಂಗಳದ ಬೆಳ್ಳಿತೆರೆಯ ರೀಲ್ ನಲ್ಲಿ ಉತ್ತಮ ನಾಯಕ ನಟನಾಗಿ ಕಾಣಿಸಿಕೊಂಡು, ರಿಯಲ್ ನಲ್ಲಿ ಅಕ್ಷರಸಃ ಖಳ ನಾಯಕನೇ .! ಅದನ್ನು ಒತ್ತಿ ಹೇಳುವ ಅಗತ್ಯವಿಲ್ಲಾ ನಾಡಿನ ಪ್ರಜ್ಞಾವಂತ ಜನೆತೆಗೆ ಗೊತ್ತಿರುವಂತದ್ದೇ. ಸುಮಾರು ಘಟನೆಗಳು ಅಚ್ಚರಿಸಿ ಮೂಡಿಸಿವೆ . ಕೆಲವೊಂದು ಬೆಳಕಿಗೆ ಬಂದರೇ ಹಲವೊಂದು ಅಲ್ಲಿಯೇ ಮುದುಡಿ ಹೋಗಿದೆ. ಸ್ವತಃ ಕಟ್ಟಿಕೊಂಡವಳಿಗೆ ಈತ ಕೊಟ್ಟ ಕಾಟ ಅಂತಿಂತ್ತದ್ದಲ್ಲ ಆ ವಿಚಾರದಲ್ಲಿ ಕಂಬಿ ಎಣಿಸಿಯೂ ಬಂದಿದ್ದ. ತನ್ನ ದೀರ್ಘಕಾಲದ ಸಂಗಾತಿ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಾರೆಂದು ಕಾರಣದಿಂದ ದರ್ಶನ್ ಜೊತೆ ಆತನ ಸ್ನೇಹಿತರೊಂದಿಗೆ ಚಿತ್ರದುರ್ಗದ ನಿವಾಸಿ ರೇಣುಕಾಸ್ವಾಮಿಯನ್ನು ಅಪಹರಿಸಿ ಶೆಡ್ ನಲ್ಲಿ ಚಿತ್ರ ಹಿಂಸೆ ನೀಡಿ ಭಯಾನಕ, ಭೀಕರ, ಭೀಬತ್ಸವಾಗಿ ಕೊಲೆಗೈದು ಅದನ್ನು ತನ್ನ ಸ್ನೇಹಿತರಿಗೆ ತಾವೇ ಮಾಡಿದ್ದೂ ಎಂದು ಪೊಲೀಸರ ಮುಂದೆ ಶರಣಾಗುವಂತೆ ಮಾಡಿ ,ಒಳಸಂಚು, ಸಾಕ್ಷ್ಯನಾಶ ಎಂಬ ವಿಚಾರವನ್ನು ಇಟ್ಟುಕೊಂಡು 2024ರ ಜೂನ್ 11ರಂದು ಬೆಂಗಳೂರು ಪೊಲೀಸರು ಬಂಧಿಸಿದ್ದರು. ಎಷ್ಟೋ ಹರ ಸಾಹಸ ಪಟ್ಟರೂ ಬೇಲ್ ಮರೀಚಿಕೆ ಯಾದಾಗ ಒಂದಷ್ಟು ದಿನ ನಾಟಕ ಅದೂ ಇದೂ ಮಾಡಿ ಆ ಜೈಲ್ ನಿಂದ ಇಲ್ಲಿಗೆ ಈ ಜೈಲ್ ನಿಂದ ಅಲ್ಲಿಗೆ ಶಿಫ್ಟ್ ಆಗಿ ಅಂತೂ ಒಂದಷ್ಟು ಸಮಯ, ಅನಾರೋಗ್ಯದ ಕಾರಣ ಒಡ್ಡಿ ಹೊರಗಡೆ ಬಂದಿದ್ದ ದರ್ಶನ್ ,ಮತ್ತೆ ಪರಪ್ಪನ ಅಗ್ರಹಾರ ಸೇರಿದ್ದಾರೆ. ಇತ್ತ ಜಾಮೀನಿಗೆ ಅದೆಷ್ಟು ಅರ್ಜಿ ಗುಜರಾಯಿಸಿದರೂ ದರ್ಶನ್ ಗೆ ಬೆಲ್ ಸಿಗುತ್ತಿಲ್ಲ ಕಾನೂನು ನಿಜಕ್ಕೂ ಕಠಿಣವಾಗಿದ್ದು ಖಂಡಿತ ಸತ್ಯ. ಇದು ಎಲ್ಲರಿಗೂ ಮಾದರಿಯಬೇಕು. ಹಲವರ ಅಭಿಪ್ರಾಯದಂತೆ ರೇಣುಕಾ ಸ್ವಾಮಿಯ ಈ ಪ್ರಕರಣವೂ ಸಹಾ ಎಲ್ಲೊ ಹಳ್ಳ ತಪ್ಪಿ ಹೋಗುತ್ತಿತ್ತು ಒಂದೊಳ್ಳೆ ನಾಣ್ಣುಡಿಯಂತೆ ಹತ್ತು ಸರಿ ಕದ್ದ ಕಳ್ಳ ಒಂದು ಸಾರಿ ಸಿಕ್ಕಿ ಹಾಕಿಕೊಳ್ಳೆಲೇ ಬೇಕು ಎನ್ನುವ ಹಾಗೆ ! ಹಾಗಂತ ಆತ ತುಂಬಾನೇ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎಂಬ ಅಂಶವನ್ನು ನಾನು ಪ್ರಸ್ತಾಪ ಮಾಡುತ್ತಿಲ್ಲ, ಯಾವುದಾರಲ್ಲೂ ಸಿಕ್ಕಿ ಹಾಕಿ ಕೊಳ್ಳುತ್ತಿರಲಿಲ್ಲ ಎಂದೂ ನಾನು ಹೇಳುತ್ತಿಲ್ಲ ಹಲವರ ಬಾಯಿಯಲ್ಲಿ ಉದುರಿದ ಮಾತು ಅಷ್ಟೇ . ಅದಕ್ಕೆ ಪುಷ್ಟಿ ನೀಡುವಂತ ಘಟನೆಗಳು ನಡೆದಿವೆ ಬಿಡಿ ಅದು ಇಲ್ಲಿ ಅಪ್ರಸ್ತುತ .
ಸೊ ಇದೂ ಕೂಡಾ ಹಾಗೆ ಆಗುತ್ತಿತ್ತೇನೋ ಹೇಗೋ ಪೊಲೀಸರು ಪತ್ತೆ ಹಚ್ಚವಲ್ಲಿ ಯಶಸ್ವಿಯಾದರು. ಒಂದೊಳ್ಳೆ ಕಾಪ್ ಆ ತಂಡದಲ್ಲಿ ಇದ್ದುದ್ದರಿಂದ ಇದೀಗ ದರ್ಶನ ಮುದ್ದೆ ಮುರಿಯ ಬೇಕಾಗಿ ಬಂತು . ರೇಣುಕಾ ಸ್ವಾಮೀ ಮಾಡಿದ್ದು ತಪ್ಪು ಅಲ್ವೇ ? ತಪ್ಪು ಮಹಾ ತಪ್ಪೇ! ಆದರೆ ಅದಕ್ಕೆ ಶಿಕ್ಷೆ ನೀಡುವ ವ್ಯವಸ್ಥೆ ನಮ್ಮಲ್ಲಿ ಇಲ್ಲವೇ? ಅದನ್ನು ಬಿಟ್ಟು ತಾವೇ ಕಾನೂನು ಕೈಗೆತ್ತಿ ಕೊಂಡರೇ ಪ್ರತಿಫಲ ಇಷ್ಟೇ. ! ಮಾಡಿದ್ದುಣ್ಣೋ ಮಹರಾಯ !! ಹಣ,ಜನ ಬಲ ರಾಜಕೀಯ ಬೆಂಬಲ ,ಇದೆ ಎಂಬ ಕಾರಣಕ್ಕೆ ಇಲ್ಲ ಸಲ್ಲದ ವಿಚಾರಕ್ಕೆ ಕೈ ಹಾಕುವ ಮುಂಚೆ ಆಲೋಚನೆ ಮುಖ್ಯ.ಸೆಲೆಬ್ರೆಟಿಯಾಗಿ ಸಮಾಜದಲ್ಲಿ ಮುನ್ನೋಟದಲ್ಲಿರುವವರು ಈ ತರಹದ ಕ್ರತ್ಯದಲ್ಲಿ ಭಾಗಿಯಾದರೇ ಯುವ ಪೀಳಿಗೆಗಳು ಯಾರನ್ನು ಮಾದರಿಯಾಗಿ ತೆಗದು ಕೊಳ್ಳಬೇಕು? ದರ್ಶನ್ ಉತ್ತಮ ವ್ಯಕ್ತಿ ಸಮಾಜದ ಹಿತಚಿಂತಕ ಸಾಕಷ್ಟು ಸಹಾಯ ಹಸ್ತವನ್ನು ಚಾಚಿದವರು ಎಂಬ ವಿಚಾರವಿದ್ದರೂ ಈ ಒಂದು ತಪ್ಪಿನಿಂದ ಅದ್ಯಾವುದು ಲೆಕ್ಕಕ್ಕೆ ಬರುವುದು ಇಲ್ಲ.ಮೊದಲಾಗಿ ಸಹವಾಸ ದಿಂದ ದೂರ ಇರುವುದೇ ಇದಕ್ಕಿರುವ ದೊಡ್ಡ ಮದ್ದು ಎನ್ನಬಹುದೇನೋ ? ಮಾಡಿದಕ್ಕೆ ಶಿಕ್ಷೆ ಅನುಭವಿಸಲಿ ಆದಷ್ಟು ಬೇಗ ಹೊರಬಂದು ತನ್ನ ತಪ್ಪಿನ ಅರಿವಾಗಿ ಮುಂದೆ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳಲಿ ಎಂಬ ಆಶಯದೊಂದಿಗೆ.

ಶನಿವಾರ, ಜೂನ್ 21, 2025

ಆನೆ ಬಂತೊಂದು ಆನೆ ..!!

ಸಿದ್ದಾಪುರ ವಾರದ ಸಂತೆ ಬಂದ್ ! ಶಾಲಾ ಕಾಲೇಜುಗಳಿಗೆ 3 ದಿನ ರಜೆ ! ಯಾರೂ ಮನೆಯಿಂದ ಹೊರಗೆ ಬರಬೇಡಿ ,ವಾಹನ ಸವಾರರೇ ಎಚ್ಚರ ವಹಿಸಿ,ಆನೆ ಕಂಡ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ, ಭಯಬೇಡ ಎನ್ನುವ ಅನ್ವಾಂಸ್ಮೆಂಟ್..!! ಎಲ್ಲರಲ್ಲೂ ಆತಂಕ, ಕುತೂಹಲ ಊರಿಗೆ ಊರೇ ಭಯದ ವಾತಾವರಣದಲ್ಲಿತ್ತು. ಅಂತೂ ಮೂರು ದಿನಗಳ ಬಳಿಕ ಎಲ್ಲವೂ ಸಹಜ ಸ್ಥಿತಿ! ಸ್ಥಳೀಯರಲ್ಲಿ ಬೇಸರ, ಸಪ್ಪೆ ಮೊರೆ ! ಇದು ಕಾಡಿನ ಆನೆ ನಾಡಿಗೆ ಬಂದ ಕಥೆ ಹಾಸನ ಜಿಲ್ಲೆಯ ದಟ್ಟ ಅರಣ್ಯವೊಂದರಲ್ಲಿ ಕಾಡಾನೆಯನ್ನು ಅರಣ್ಯ ಇಲಾಖೆ ಸೆರೆ ಹಿಡಿದಿದ್ದರು. ಅದಕ್ಕೆ ಜಿಪಿಎಸ್ ನ್ನು ಅಳವಡಿಸಿ, 'ಹಡ್ಕ ಬಡ್ಕ' ಎಂಬ ನಾಮಧೆಯವನ್ನು ಮಾಡಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೀಸಲು ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದರು. ಅದೇನೋ ಗೊತ್ತಿಲ್ಲ ಒಂದೆರಡು ದಿನ ಅಷ್ಟೇ ತನ್ನ ಕಾಡು, ಬಂಧು-ಬಳಗದವರ ನೆನಪು ಆಯಿತೋ ಏನೋ ಹಡ್ಕ ಬಡ್ಕ ಅಲ್ಲಿಂದ ತಪ್ಪಿಸಿಕೊಂಡು ಬಿಟ್ಟ.ತನ್ನ ಕಾಡನ್ನು ಅರಸುತ್ತಾ,ಅರಸುತ್ತಾ ಬಾಳೆಬರೆ ಘಾಟಿ ಇಳಿದ.ಘಾಟಿ ಇಳಿಯುತ್ತಿದ್ದ ಸಂದರ್ಭ ಒಂದಶ್ಟು ವಾಹನ ಸವಾರರು ಅದನ್ನು ನೋಡಿದ್ದರು. ವೀಡಿಯೋ ಫೋಟೋ ತೆಗೆದು ಸಾಮಾಜಿಕ ಜಾಲ ತಾಣಗಳಲ್ಲಿ ಹರಿಯಬಿಟ್ಟದ್ದರು. ಯಾರಿಗೂ ತೊಂದರೆ ಮಾಡದೇ ತನ್ನ ಪಾಡಿಗೆ ರಾಜ್ಯ ಹೆದ್ದಾರಿಯಲ್ಲೇ ತೆರಳುತ್ತಿದ್ದ ಹಡ್ಕ ಬಡ್ಕ, ಸಿದ್ದಾಪುರ ಸಮೀಪದ ಕೂಗಳತೆಯ ದೂರದಲ್ಲಿರುವ ಹೆನ್ನಾಬೈಲು ಅರಣ್ಯ ಸೇರಿ ಬಿಟ್ಟಿದ್ದ.ಇತ್ತ ಅರಣ್ಯ ಇಲಾಖೆಗೆ ಮಾಹಿತಿಯೂ ಹೋಗಿತ್ತು ಹಾಗೆ ಜಿಪಿಎಸ್ ತಂತ್ರಜ್ಞನ ಅಳವಡಿಸಿದ್ದರಿಂದ ಸ್ಥಳೀಯರ ನೆರವಿನಿಂದ ಆನೆಯನ್ನು ಅರಸುವಲ್ಲಿ ಹೆಚ್ಚಿನ ಸಮಯವೂ ಬೇಕಾಗಿಲ್ಲ.
ಒಂಟಿ ಸಲಗ ಬಹಳ ಅಪಾಯಕಾರಿ ಎನ್ನುವ ಮಾತನ್ನು ಸುಳ್ಳಾಗಿಸಿದ್ದ ಈ ಹಡ್ಕ ಬಡ್ಕ ಆನೆ ಸುಮಾರು 150 ಕಿಮೀ ದೂರ ಒಂದೇ ಸಮನೆ ನಡೆದು ಕೊಂಡು ಬಂದರೂ ಯಾರಿಗೂ,ಯಾವುದಕ್ಕೂ ಅನಾಹುತ ಮಾಡಿರಲಿಲ್ಲ. ಆತನ ಮೈಂಡ್ ನಲ್ಲಿ ಇದ್ದಿದ್ದು ತನ್ನ ಕಾಡು ಹಾಗೂ ಪರಿವಾರ ಮಾತ್ರ. ಎಲ್ಲೂ ಕೂಡಾ ವಿಶ್ರಾಂತಿ ಪಡೆಯದೇ ಹಸಿವು,ನಿದ್ರೆ ಬಾಯಾರಿಕೆಯನ್ನೂ ಬದಿಗೆ ಒತ್ತಿ ಆತ ಹಗಳು ಇರುಳು ಸಂಚಾರ ಮಾಡಿ ಸೇರಿದ್ದು ಹೆನ್ನಾ ಬೈಲು ಕಾಡನ್ನು ಅಲ್ಲಿ ಮಾತ್ರ ಆತ ಎರಡು ದಿನ ತಂಗಿದ್ದ ಬಟ್ ರೆಸ್ಟ್ ತೆಗೆದು ಕೊಳ್ಳಲು ನಮ್ಮವರು ಬಿಟ್ಟಿಲ್ಲ! ಆನೆ ಬಂತು ಆನೆ ಎಂಬ ಕೂಗು ರಾಜ್ಯಾಧ್ಯಂತ ಹರಡಿತ್ತು. ಭಯದ ವಾತಾವರಣ ಮಡುಗಟ್ಟಿತ್ತು.
ಆನೆಯನ್ನು ಮರಳಿ ಬಂಧಿಸುವ ಯೋಜನೆ ಸಿದ್ಧವಾಯಿತು.ಮಂಗಳೂರು ಚಿಕ್ಕಮಗಳೂರು ಶಿವಮೊಗ್ಗದ ಸೇರಿದಂತೆ ವಿವಿಧ ಸ್ಥಳಗಳಿಂದ ಸುಮಾರು 150 ಅರಣ್ಯ ಇಲಾಖೆ ಅಧಿಕಾರಿಗಳು,ಪಶು ವೈದ್ಯರು,15 ಜನ ಮಾವುತರು, ಏಕಲವ್ಯ,ಭೀಮ,ಮಹೇಂದ್ರ, ಸೊಮ್ಮಣ್ಣ ,ಬಾಬಣ್ಣ,ಬಹಾದ್ದೂರ್ ಎಂಬ 6 ಸಾಕು ಆನೆಗಳ ನೇತೃತ್ವದ ಕಾರ್ಯಾಚರಣೆ ಪ್ರಾರಂಭವಾಯಿತು.ಅಂತೂ ಹಡ್ಕ ಬಡ್ಕನಿಗೆ ಪಶು ವೈದ್ಯರು ಅರವಳಿಕೆ ಚುಚ್ಚುಮದ್ದು ಕೊಟ್ಟು ಪ್ರಜ್ಞೆ ತಪ್ಪಿಸಿದರು. ಕ್ರೇನ್ ಮೂಲಕ ದೊಡ್ಡ ಟ್ರಕ್ ಗೆ ಆನೆಯನ್ನು ಲೋಡ್ ಮಾಡಿ ಶಿವಮೊಗ್ಗ ಜಿಲ್ಲೆಯ ಸಕ್ರೀಬೈಲ್ ಆನೆ ಶಿಬಿರಕ್ಕೆ ಕೊಂಡುವಯ್ದ್ ಬಿಟ್ಟರು.ಮೊದ ಮೊದಲು ಆತಂಕ ,ಭಯದಲ್ಲಿದ್ದ ಅಲ್ಲಿನ ಸ್ಥಳೀಯರು ಆನೆಯನ್ನು ಲಾರಿಗೆ ಏರಿಸಿದ್ದು ಆನೆಯನ್ನು ಹಿಡಿದು ಇಂಜೆಕ್ಷನ್ ಕೊಟ್ಟುದ್ದನ್ನು ನೋಡಿ ಕೆಲವರ ದುಃಖ ಹೇಳ ತೀರದಾಗಿತ್ತು.ಗಳ ಗಳನೆ ಅತ್ತವರು ಕೂಡ ಇದ್ದಾರೆ.ಯಾರಿಗೂ ಯಾವುದಕ್ಕೂ ಏನೂ ಉಪದ್ರವ ತೊಂದರೆ ಕೊಡದ ಆನೆಯನ್ನು ಹೊತ್ತುವೊಯ್ದು ಮತ್ತೆ ಪಂಜರದಲ್ಲಿ ಕೂಡಿ ಹಾಕುತ್ತರಲ್ಲ ಆನೆಯ ತಪ್ಪಾದರೂ ಏನು ? ಹೆಚ್ಚಿನವರ ಸವಾಲ್ ಗೆ ಜವಾಬ್ ಇಲ್ಲದಾಗಿ ತ್ತು.ಆನೆಯ ಕಣ್ಣಿರು ಧಾರಾಕಾರವಾಗಿ ಇಳಿಯುತ್ತಿತ್ತು ಆನೆ ಮಾವುತ ಅದನ್ನು ಕರ್ಚಿಪ್ ನಿಂದ ಮುಚ್ಚಿಯೂ ಬಿಟ್ಟಿದ್ದ.!! -shiವು

ಸೋಮವಾರ, ಮಾರ್ಚ್ 10, 2025

ಟೀಮ್ ಇಂಡಿಯಾ ವಿಶ್ವ ಚಾಂಪಿಯನ್ : ಕೀಪಿಂಗ್ ಗೂ ಸೈ.. ಫಿನಿಶಿಂಗ್ ಗೂ..... ನಮ್ಮ ಕೆ ಎಲ್ !

ಟೀಮ್ ಇಂಡಿಯಾ ಕ್ರಿಕೆಟ್ನಲ್ಲಿ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದೆ.ಕಳೆದ ವರ್ಷ ಕೈಗೆ ಬಂದ ತುತ್ತು ಬಾಯಿಗೆ ಬಾರದೇ ಸ್ವತಃ ನೇತೃತ್ವ ವಹಿಸಿಕೊಂಡ ವಿಶ್ವಕಪ್ ಒಂಡೇ ಫೈನಲ್ ಪಂದ್ಯದಲ್ಲಿ ಅಹಮದ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತು ಕಣ್ಣೇರಿಟ್ಟ ಭಾರತಡಾ ಕಿಲಾಡಿಗಳು ತನ್ನ ತಪ್ಪನ್ನೆಲ್ಲಾ ಮನವರಿಕೆ ಮಾಡಿಕೊಂಡು ನಂತರ ಎಲ್ಲಾ ಮ್ಯಾಚ್ ನಲ್ಲೂ ಗೆಲುವಿನ ನಗೆ ಬೀರುತ್ತಾ ಬಂದಿದ್ದಾರೆ ಐಸಿಸಿ ಆಯೋಜನೆಯಲ್ಲಿ ಕೆಲವು ತಿಂಗಳ ಮೊದಲು ನಡೆದ ವರ್ಲ್ಡ್ ಕಪ್ ಟೀ20ಯ ಫೈನಲ್ ಪಂದ್ಯದಲ್ಲಿ ಬಲಿಷ್ಠ ದಕ್ಷಿಣ ಆಫ್ರಿಕಾವನ್ನು ಮಣಿಸಿ ಕಪ್ಗೆ ಮುತ್ತಿಟ್ಟಿತ್ತು.ಅದೇ ಸತತ ಗೆಲುವಿನ ನಾಗಲೋಟ ಮುಂದುವರೆದು ವಿಶ್ವದಲ್ಲಿ ನಾವೇ ಬಲಶಾಲಿ ಎಂದು ಉಳಿದ ರಾಷ್ಟ್ರಗಳು ಒಪ್ಪಿಕೊಳ್ಳುವಂತೆ ಮಾಡಿತು. ಅಂತೂ ಇತ್ತೀಚಿಗೆ ಪ್ರಾರಭಗೊಂಡು ಐಸಿಸಿ ಆಯೋಜನೆಯ ಪಾಕಿಸ್ತಾನ ನೇತೃತ್ವದಲ್ಲಿ ಸುಮಾರು 12 ವರ್ಷಗಳ ಬಳಿಕ ನಡೆದ ಮಿನಿ ವಿಶ್ವಕಪ್ ಎಂದು ಕರೆಯಿಸಿ ಕೊಳ್ಳುವ ಚಾಂಪಿಯನ್ ಟ್ರೋಫಿಯನ್ನು ಇಂದು ನ್ಯೂಜಿಲ್ಯಾಂಡ್ ವಿರುದ್ದ ದುಬೈನಲ್ಲಿ ನಡೆದ ಜಿದ್ದಾ ಜಿದ್ದಿ ರೋಮಾಂಚನಕಾರಿ ಪಂದ್ಯಾಟದಲ್ಲಿ ಕಪ್ನ್ನ ಎತ್ತಿಕೊಂಡಿದೆ.
ಐದೂ ಮ್ಯಾಚ್ನಲ್ಲೂ ಸೋಲಿಲ್ಲಿದ ಸರದಾರರಂತೆ ಎದುರಾಳಿ ಬಾಂಗ್ಲಾದೇಶ ದಿಂದಲೇ ಮೊದಲ್ ಗೊಂಡು ಕಪ್ ಎತ್ತಿಕೊಳ್ಳುವವರೆಗೂ ಮುಂದುವರೆಯಿತು.ಬಾಲಿಂಗ್ ,ಬ್ಯಾಟಿಂಗ್ ಎರಡರಲ್ಲೂ ಮಿಂಚಿದ ಟೀಮ್ ಇಂಡಿಯಾದಲ್ಲಿ ಎಲ್ಲಾ ಆಟಗಾರರ ಪಾತ್ರವೂ ಪ್ರಮುಖ ವಾಗಿ ಕಾಣಿಸಿತು . ಒಂದೊಂದು ಮ್ಯಾಚ್ನಲ್ಲಿ ಒಬ್ಬೊಬ್ಬರು ಹೀರೊಗಳಾಗಿ ಕಂಡು ಬಂದರು. ಪಾಕಿಸ್ತಾನ ವಿರುದ್ಧ ಕಿಂಗ್ ಕೊಹ್ಲಿ ಗೆಲುವಿನ ರೂವಾರಿಯಾಗಿ ಸೆಂಚುರಿ ಸಿಡಿಸಿದರೇ ,ಅತಿಮೂಲ್ಯವಾದ ಇಂದಿನ ಪಂದ್ಯದಲ್ಲಿ ಒಂದಕ್ಕಿಗೆ ಸುತ್ತಿ ಹಿಂತುರಿಗಿದರು.ಯಾವುದೇ ಮ್ಯಾಚ್ ನಲ್ಲೂ ಅಷ್ಟೊಂದು ಕಾಣಿಕೆ ನೀಡದ ಕ್ಯಾಪ್ಟನ್ ರೋಹಿತ್ ಶರ್ಮಾ ಇಂದಿನ ಮ್ಯಾಚ್ ನಲ್ಲಿ ಹಿಟ್ ಮ್ಯಾನ್ ಆಗಿ ಅಕ್ಷರಸ ಕಂಡು ಬಂದರು,ಗೆಲುವಿಗೆ ಪ್ರಮುಖ ಕಾರಣರಾದರು.ಜೊತೆಗೆ ಮ್ಯಾನ್ ಆಪ್ ದಿ ಮಾಚ್ ಪ್ರಶಸ್ತಿಗೆ ಕೂಡ ಭಾಜನರಾದರು.ಇನ್ನು ಬಿಸಿಸಿಐ ಸೈಡ್ ಲೈನ್ ಮಾಡಿದ್ದ ಶ್ರೇಯಸ್ ಅಯ್ಯರ್ಗೆ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿ ಕೊಂಡರು ಪಂದ್ಯದ್ದುದ್ದಕ್ಕೂ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದ ಈತ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿ ಸ್ಕೋರ್ ಲಿಸ್ಟ್ನಲ್ಲಿ ಟೀಮ್ ಇಂಡಿಯದ ಪರವಾಗಿ ಪ್ರಥಮ ಹಾಗೂ ಓವರ್ ಆಲ್ ಆಗಿ ಎರಡನೇ ಸ್ಥಾನನ್ನು ತಮ್ಮದಾಗಿಸಿಕೊಂಡರು.ಪ್ರಥಮ ಸ್ಥಾನ ನ್ಯೂಜಿಲ್ಯಾಂಡ್ ನ ರಚಿನ್ ರವೀಂದ್ರ 263 ರನ್ ಸಂಪಾದಿಸಿದ್ದರು ಹಾಗೂ 3 ವಿಕೆಟ್ ಪಡೆದು ಸರಾಸರಿ 4.6ನಲ್ಲಿ ಮ್ಯಾನ್ ಒಫ್ ದಿ ಸೀರಿಸ್ ಪಡೆದುಕೊಂಡರು.ನಮ್ಮ ಕನ್ನಡಿಗ ವರುಣ್ ಚಕ್ರವರ್ತಿ ವಿಕೆಟ್ ಪಡೆದ ಲಿಸ್ಟ್ ನಲ್ಲಿ ಎರಡನೇ ಸ್ಥಾನದಲ್ಲಿ ಕಂಡು ಬಂದರು.,ಮೊದಲ ಸ್ಥಾನ ನ್ಯೂಜಿಲ್ಯಾಂಡ್ ನ ಹೆನ್ರಿಯ ಪಾಲ್ ಆಗಿದ್ದರೇ ಎರಡನೇದು ನಮ್ಮ ಸ್ಪಿನ್ನಿಂಗ್ ಮಾಂತ್ರಿಕ ಚಕ್ರವರ್ತಿ. ಒಂದೇ ಮ್ಯಾಚ್ ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ 10 ಓವರ್ ಗೆ 42 ರನ್ ನೀಡಿ ಅಮೂಲ್ಯ ಐದು ವಿಕೆಟ್ ಕಬಳಿಸಿದ್ದರು ಇನ್ನು ಅದೇ ಮ್ಯಾಚ್ನಲ್ಲಿ ನ್ಯೂಜಿಲ್ಯಾಂಡ್ ನ ಫಾಸ್ಟ್ ಬೌಲರ್ ಹೆನ್ರಿ ಕೂಡ ಸೇಮ್ ಟು ಸೇಮ್ ದಾಖಲೆ ನಿರ್ಮಾಣ ಮಾಡಿದ್ದರು . ಇನ್ನು ಎಲ್ಲಕಿಂತ ಹೆಚ್ಚಾಗಿ ನನ್ನ ಒಡಲಧ್ವನಿಗೆ ಕಾಡಿದ್ದು, ಬೇಡಿದ್ದು ನಮ್ಮ ಕೆ ಎಲ್ ರಾಹುಲ್!ಈತ ಮಾತ್ರ ಅದ್ಬುತ ಪ್ರತಿಭೆ ಎಂಬುದರಲ್ಲಿ ಎರಡು ಮಾತಿಲ್ಲ ಪೊಲಿಟಿಕ್ಸ್ ಹಾಗೂ ಮತ್ತಿತ್ಯಾದಿ ಕಾರಣಗಳಿಗೆ ತನ್ನನ್ನು ತ್ಯಾಗ ಮಾಡುವ ಕೆಎಲ್ಲ್ ಸಿಕ್ಕ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳದೇ ಇರಲಾರರು ಇದರ ಬಗ್ಗೆ ಹೆಚ್ಚು ಹೇಳುವ ಅಗತ್ಯ ಇಲ್ಲ.ಕ್ರಿಕೆಟ್ ನೋಡುಗರು ಕ್ರಿಕೆಟ್ ಪ್ರೇಮಿಗಳು ಖಂಡಿತವಾಗಿಯೂ ಅರಿತುಕೊಂಡಿರುತ್ತಾರೆ. ಟೀಮ್ ಇಂಡಿಯಾದ ಮೆನೇಜ್ಮೆಂಟ್ ಯಾವ ತರಹ ಅವರನ್ನು ಬಳಸಿ ಕೊಳ್ಳುತ್ತಿದ್ದಾರೆ ,ಬಲಿ ಕೊಡುತ್ತಿದ್ದಾರೆ ಎಂದು.! ಆದರೂ ಕಿಂಚಿತ್ ಅಸಮಾಧಾನ ತೋರದೇ ತನ್ನ ಪಾಡಿಗೆ ತಾನು ನ್ಯಾಯ ಒದಗಿಸುತ್ತಾ ಬರುತ್ತಿದ್ದಾರೆ.ನಿಜಕ್ಕೂ ಕ್ರಿಕೆಟ್ ಇತಿಹಾಸದಲ್ಲಿ ಈತನ ಸರಿ ಸಾಟಿ ಬೇರೆ ಯಾರು ಇರಲಿಕ್ಕಿಲ್ಲವೇನೋ ?ಓಪನಿಂಗ್ಗೂ ಸೈ . ಫಿನಿಶಿಂಗ್ಗೂ ಜೈ!! ಓಪನರ್ ಆಗಿ ಬ್ಯಾಟ್ ಬೀಸಬಲ್ಲರು ಐದನೇ,ಎಂಟನೇ ಕ್ರಮಾಂಕದಲ್ಲೂ ಕೂಡ ಬ್ಯಾಟ್ ಮಾಡಬಲ್ಲರು.ಎಲ್ಲಕಿಂತ ಹೆಚ್ಚಾಗಿ ಉತ್ತಮ ಕೀಪರ್ ! ಮೆನೇಜೆಮೆಂಟ್ ಅಪ್ಪಣೆಗನುಗುಣವಾಗಿ ಆಗಾಗ ಕೀಪರ್ , ಮ್ಯಾಚ್ ಫಿನಿಶರ್ ಆಗಿ ಕೂಡ ಕರ್ತವ್ಯ ನಿಭಾಯಿಸುವ ಕೆಲ್ ಉತ್ತಮ ಕ್ರಿಕೆಟಿಗ.ಸೆಮಿಫೈನಲ್ ಮತ್ತು ಫೈನಲ್ ಪಂದ್ಯದಲ್ಲಿ ಫಿನಿಶರ್ ಆಗಿ ತಮ್ಮ ಜವಾಬ್ದಾರಿಯುತ ಆಟ ಪ್ರದರ್ಶಿಸಿದ ಕೆಎಲ್ಲ್ ನಮ್ಮ ಹೆಮ್ಮೆ. ದಯಮಾಡಿ ಮೆನೇಜ್ಮೆಂಟ್ ಗಮನಹರಿಸಬೇಕು ಆತನ ಜೊತೆ ಬಿಟ್ಟ ಸ್ಥಳ ಭರ್ತಿ ಮಾಡಲು ಅಥವಾ ಕೆರೆಯರ್ ಹಾಳುಗೆಡುವ ರಾಜಕೀಯದಾಟ ಆಡದೇ ಆತನ ಸಾಮರ್ಥ್ಯವನ್ನು ಮನಗಾಣಿ. -shiವು

ಭಾನುವಾರ, ಜೂನ್ 9, 2024

ಮೋದಿ ಯುಗ ಮುಗಿತೇ ?ರಾಮನ ನಾಡಿನಲ್ಲಿ ಸಿಗಲಿಲ್ಲ ನಿರೀಕ್ಷಿತ ಬೆಂಬಲ !!

ಅಂತೂ, ಎಲ್ಲರ ಬಹು ನೀರಿಕ್ಷೆಯ ಲೋಕ ಸಭಾ ಎಲೆಕ್ಷನ್ ರಿಸಲ್ಟ್ ಬಂದಿದೆ .ಅಬ್ ಕಿ ಬಾರ್ 400 ಪಾರ್ ಎನ್ನುವ ಘೋಷಣೆಯೊಂದಿಗೆ ಅತ್ಯಂತ ಪ್ರಚಲಿತದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತೀಯ ಜನತಾ ಪಾರ್ಟಿ ಮತ್ತು ಅದರ ಮಿತ್ರ ಪಕ್ಷಗಳಿಗೆ (ಎನ್ ಡಿ ಎ) ಘೋಷಣಾ ಸಂಖ್ಯೆ ಬದಿಗಿರಿಲಿ ಅಟ್ಲಿಸ್ಟ್ ಬಹುಮತವನ್ನೂ ಪಡೆಯುವಲ್ಲಿ ಸಫಲ ಕಾಣಲಿಲ್ಲ, ಇನ್ನೂ ಘಟಬಂಧನದ ಇಂಡಿಯಾ ಒಕ್ಕೂಟಕ್ಕೂ ಬಹುಮತ ಲಭಿಸಿಲ್ಲ ಅದು ದಕ್ಕಿಸಿ ಕೊಳ್ಳುವುದು ಅಷ್ಟೊಂದು ಸುಲಭದ ಮಾತು ಅಲ್ಲ.ನಾವು ಗೆದ್ದೇ ಬೀಗುತ್ತಿವೀ ಎನ್ನುವ ಬಿಜೆಪಿಯ ತತ್ವ ಸಿದ್ದಾಂತಗಳೆಲ್ಲಾ ಮತದಾರ ತಲೆ ಕೆಳಗಾಗಿಸಿದ್ದಾನೆ ಇನ್ನೂ ಚುನಾವಣಾ ಸಮೀಕ್ಷೆ(ಎಕ್ಸಿಟ್ ಪೋಲ್) ಎಲ್ಲವೂ ಸುಳ್ಳಾಗಿಸಿದೆ ಮತದಾರ ಬದಲಾವಣೆ ಬಯಸಿದ್ದಾನೋ ಅಥವಾ ಕೊನೆ ಕ್ಷಣದಲ್ಲಿ ಇಂಡಿಯಾದ ಮೈತ್ರಿಕೂಟದ ಗ್ಯಾರಂಟಿಗಳೆಲ್ಲಾ ಕೈ ಹಿಡಿಯಿತೋ ಗೊತ್ತಿಲ್ಲ.
ಬಿಜೆಪಿ 240 ಹಾಗೂ ಅದರ ಮೈತ್ರಿಕೂಟ 293ಕ್ಕೆ ತೃಪ್ತಿ ಪಡೆದು ಕೊಳ್ಳುವಂತಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಉಳಿಗಾಲ ಇಲ್ಲ ಎನ್ನುವ ಪರಿಸ್ಥಿತಿಯಲ್ಲಿ ಫಿನಿಕ್ಸ್ ನಂತೆ ಎದ್ದು ಬಂದಿದ್ದೆ ಸೋಜಿಗ ಅಚ್ಚರಿ ಪಡುವಂತಿದೆ ಕಳೆದ 2019 ರ ಚುನಾವಣೆಯಲ್ಲಿ52 ಸೀಟು ಬಾಚಿದ್ದ ಕೈ ಪಾರ್ಟಿ ಈ ಬಾರಿ 99 ಕ್ಕೆ ಬಂದು ನಿಂತಿತು. ಅದರ ಹೊಸ ನಾಮಧೇಯದ ಇಂಡಿಯಾ ಮೈತ್ರಿ ಕೂಟ ಒಟ್ಟು 234 ಕ್ಷೇತ್ರವನ್ನು ತನ್ನದಾಗಿಸಿ ಕೊಂಡಿತು.ಯಾವ ಪಾರ್ಟಿಗೂ ನಿಚ್ಚಳ ಬಹುಮತ ದೊರಕದೆ ಇದ್ದರೂ ಸಹಾ, ಸರ್ಕಾರ ರಚಿಸುವುದಕ್ಕೆ ಇಬ್ಬರಿಗೂ ಅಡ್ಡಿ ಇಲ್ಲ ಬಹುಪಾಲು ಭಾರತೀಯ ಜನತಾಪಾರ್ಟಿ ನೇತೃತ್ತ್ವದ ಏನ್ ಡಿ ಎಗೆ ಅವಕಾಶ ಇದ್ದರೂ, ಅದು ಅಷ್ಟು ಸುಲಭದ ಮಾತು ಅಲ್ಲ. ಅದರ ಎರಡು ಮಿತ್ರ ಪಕ್ಷಗಳಾದ ಬಿಹಾರದ ನಿತೀಶ್ ಕುಮಾರ್ ಸಾರಥ್ಯದ ಜೆಡಿಯು,ಹಾಗೂ ಆಂಧ್ರ ಪ್ರದೇಶದ ತೆಲುಗು ದೇಶಂ ಪಾರ್ಟಿಯ ಚಂದ್ರ ಬಾಬು ನಾಯ್ಡು 16 ಮತ್ತು 12 ಎಂಪಿ ಬಲವನ್ನು ಹೊಂದಿರುವ ಈರ್ವರು ಎನ್ ಡಿ ಯ ಕೇಂದ್ರ ಬಿಂದು.ಇಂಡಿಯಾ ಹಾಗೂ ಎನ್ ಡಿ ಯ ಕ್ಕೂ ಕೂಡಾ ಸರಕಾರ ರಚಿಸುವದಕ್ಕೆ ಈರ್ವರೇ ಕಿಂಗ್ ಮೇಕರ್ ಗಳು. ಈರ್ವರೂ ಕೂಡಾ ಬಹಳ ಡೇಂಜರ್ ಗಳೇ ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಹಾರುವ ಹಕ್ಕಿಗಳು.ಕುರ್ಚಿ,ಪದವಿಗಾಗಿ ಹಂಬಲಿಸುವ ಬಕ ಪಕ್ಷಿಗಳು ಎನ್ನಬಹುದು.ಪಲ್ಟಿ ರಾಮ್ ಎಂದೇ ಖ್ಯಾತಿ ಪಡೆದಿರುವ ನಿತೀಶ್ ಕುಮಾರ್ ಗಾಳಿ ಬಂದ ಕಡೆ ತೋರಿ ಕೊಳ್ಳುವ ಮಹಾನ್ ಅತಿರಥ. ಇತ್ತೀಚೆಗಷ್ಟೇ ಇಂಡಿಯಾ ಒಕ್ಕೂಟ ಸೇರಿ ಪುನಾ: ಎನ್ ಡಿ ಎ ಜೊತೆ ಸೇರಿದವರು. ಈತ ಸದಾ ಲಾಭದ ದಿಕ್ಕಿಗೆ ಸಂಚರಿಸುವ ವ್ಯಕ್ತಿ ಅದಕ್ಕಾಗಿ ಏನೋ ಪ್ರಧಾನಿ ನರೇಂದ್ರ ಮೋದಿಯವರೇ ಆತನಿಗೆ ಪಲ್ಟಿ ರಾಮ್ ಎಂದೇ ಅಡ್ಡ ಹೆಸರು ಇಟ್ಟಿದ್ದರು. ಇನ್ನು ಚಂದ್ರ ಬಾಬು ನಾಯ್ಡು ಕೂಡಾ ಇದಕ್ಕೆ ಹೊರತಾಗಿಲ್ಲ. ಈ ಇಬ್ಬರು ಯಾವುದೇ ಪಾರ್ಟಿ ಸೇರಿದರೇ ಮಾತ್ರ ಮ್ಯಾಜಿಕ್ ಸಂಖ್ಯೆ ಯೊಂದಿಗೆ ಸರ್ಕಾರ ರಚಿಸಲು ಸಹಕಾರಿ ಯಾಗಬಹುದು ಇಬ್ಬರ ಅಂಗಳದಲ್ಲಿ ಚೆಂಡು ಇದೆ .ಇಬ್ಬರನ್ನು ದೆಹಲಿಗೆ ಕರೆಯಿಸಿ ಬಿಜೆಪಿ ಪ್ರಮುಖರು ಮೀಟಿಂಗ್ ಮಾಡಿದ್ದು ಆಯಿತು, ಈರ್ವರ ಮನ ಒಲಿಸಿದ್ದು ಸದ್ಯಕ್ಕಿರುವ ವಿಚಾರವಾದರೂ ಮುಂದೇನೋ ಪ್ರಶ್ನಾರ್ಥ ಚಿಹ್ನೆ. ದೊಡ್ಡ ದೊಡ್ಡ ಬೇಡಿಕೆ ಇಟ್ಟು ಕಾಂಗ್ರೆಸ್ ಕೂಡಾ ಮನಸೆಳೆಯುತ್ತಿದೆ ಎಂಬ ವಿಚಾರವಿದ್ದರೂ, ಎರಡು ಬದಿಯಲ್ಲೂ ಸರಕಾರ ರಚಿಸಲು ಇವರೇಗಳೇ ಪ್ರಮುಖ ಧಾರಿಗಳು ಹಾಗಾಗಿ ಅಪ್ಪಿಕೊಳ್ಳಲು ಹಾಗೂ ಅವರ ಬೇಡಿಕೆಯನ್ನು ಒಪ್ಪಿಕೊಂಡು ಸರ್ಕಾರ ಸ್ಥಾಪಿಸಲು ಸರಳವಾಗಿ 400 ಸ್ಥಾನ ದಾಟಲಿದೆ ಎಂಬಂತೆ ಬಿಂಬಿತವಾಗಿದ್ದರೂ ಬಿಜೆಪಿ ಎಡವಿದ್ದು ಎಲ್ಲಿ ? ಅಯೋಧ್ಯಯಲ್ಲಿ ರಾಮ ಮಂದಿರವನ್ನು ಪುನರ್ ನಿರ್ಮಾಣ ಮಾಡಿ ಹಿಂದೂಧರ್ಮಗಳ ಮತ ಬಾಚಿ ಕೊಳ್ಳುತ್ತದೆ ಎಂದೇ ಭವಿಷ್ಯ ಹೇಳುತ್ತಿದ್ದರೂ ,ಎಲ್ಲವೂ ಉಲ್ಟಾ ಪಲ್ಟಾ ಆಗಿ ಹೋಗಿದ್ದು ಅಚ್ಚರಿಸಿ ಪಡುವಂತಿದೆ. ದೇಶದಲ್ಲಿ ಉತ್ತರ ಪ್ರದೇಶವು ಅತ್ಯಧಿಕ ಸೀಟು ಗೆಲ್ಲುತ್ತದೆ ಎಂದೇ ಭಾವಿಸಲಾಗಿತ್ತು ಮತ್ತೂ ಅದನ್ನು ಪಡೆದದೇ ತೀರಬೇಕಿತ್ತು 80 ಸೀಟಿನಲ್ಲಿ ಕಳೆದ 2019 ರಲ್ಲಿ 62 ಸೀಟು ಪಡೆದಿತ್ತು.ಈ ಬಾರಿ ಅದಕ್ಕಿಂತಲೂ ಲೆಕ್ಕಚಾರದಲ್ಲಿ ಹೆಚ್ಚೇ ಗೆಲ್ಲಬೇಕಿತ್ತು 80 ಕ್ಕೆ 80 ಕ್ಕೂ ಬಾಚಿ ಕೊಳ್ಳುವ ಅವಕಾಶವನ್ನು ಹೊಂದಿತ್ತು 500ವರ್ಷಗಳಿಂದಲೂ ಬಹಳಷ್ಟು ಚರ್ಚೆಯ ವಿಷಯವಾಗಿದ್ದ ಅಯೋಧ್ಯಾ ರಾಮಂದಿರದ ನಿರ್ಮಾಣ ಮತ್ತು ಉದ್ಘಾಟನೆ ವಿಶ್ವದಾದ್ಯಂತ ಪ್ರಚಲಿತಕ್ಕೆ ಬಂದಿತ್ತು ಹಾಗೂ ಪ್ರಧಾನಿ ನರೇಂದ್ರ ಮೋದಿ ಮತ್ತು ಅಲ್ಲಿನ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ್ ಎಲ್ಲಾ ಮತಗಟ್ಟೆಯನ್ನು ಈ ಬಾರಿ ಖಂಡಿತ ಕೊಳ್ಳೆ ಹೊಡೆದೆ ಹೊಡೆಯುತ್ತಾರೆ ಎಂದು ಬೀಗಿದ್ದು ಸತ್ಯ. ಇನ್ನು ಉತ್ತರ ಪ್ರದೇಶದಲ್ಲಿ ಬಹಳಷ್ಟು ಅಭಿರುವುದ್ಧಿ ಕೆಲಸ ಕಾರ್ಯಗಳೂ ನಡೆದಿತ್ತು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ,ಜೊತೆಗೆ ಇನ್ಫೋಟ್ರಕ್ಸ್ಚಾರ್ ಕೆಲಸಗಳು ಅದ್ಭುತವಾಗಿ ನಡೆದಿದ್ದವು .ಇಷ್ಟೆಲ್ಲಾ ಇಂಪ್ರುಮೆಂಟ್ ಆಗಿದ್ದ ಯುಪಿಯಲ್ಲಿ ಜನತಾ ಜನಾರ್ಧನ ವೋಟು ಕೊಡಲೇ ಇಲ್ಲೇ ಕಳೆದ ಚುನಾವಣಾ ಯಲ್ಲಿ62 ಸಿಕ್ಕಿದ್ದ ಸೀಟು ಈ ಬಾರಿ ಕೇವಲ ಅದರ ಅರ್ಧದಷ್ಟು ಕಡಿಮೆಗೊಂಡಿತ್ತು ಕೇವಲ 32 ಸೀಟಿಗೆ ತೃಪ್ತಿ ಪಡೆದುಕೊಳ್ಳಬೇಕಾದ ಅನಿವಾರ್ಯತೆ ಉದ್ಭವಿತು.ಜೊತೆಗೆ ಮಾಹಾರಾಷ್ಟ,ರಾಜಸ್ಥಾನ, ಮಧ್ಯ ಪ್ರದೇಶಗಳೂ ಕೂಡ ಮೋಸ ಮಾಡಿ ಬಿಟ್ಟವು. ನರೇಂದ್ರ ಮೋದಿ ವರ್ಚಸ್ಸು ಕುಠಿತ ಗೊಂಡಿತೇ ? ಬಿಜೆಪಿ ಸರ್ಕಾರದ ಆಡಳಿತ ಹಳಸಿತೇ ,ಸಾಕು ಅನ್ನಿಸಿತೇ ಗೊತ್ತಿಲ್ಲ.ನರೇಂದ್ರ ಮೋದಿಯ ಅಲೆ, ವರ್ಚಸ್ಸಿನಿಂದ ಸತತ ಎರಡೆರಡು ,ಮೂರ್ಮೂರು ಬಾರಿ ಎಲ್ಲಾ ಹೆಚ್ಚಿನ ಅಭ್ಯರ್ಥಿಗಳು ಗೆದ್ದು ಬಂದಿದ್ದು ವಾಸ್ತವ ಈ ಬಾರಿ ಇಷ್ಟೆಕ್ಕೆ ತಂದು ನಿಲ್ಲಿಸಿದ ಮತದಾರ, ಮುಂದೆ ಬಿಜೆಪಿಯ ಭವಿಷ್ಯ ಏನು ಎತ್ತ ಎಂಬುದು ಯಕ್ಷ ಪ್ರಶ್ನೆ. ಈ ಬಾರಿ ಮೋದಿಯೂ ಸಹಾ ತಮ್ಮ ಎಂದಿನ ಕ್ಷೇತ್ರವಾದ ವಾರಾಣಾಸಿಯಲ್ಲೂ ಸಹಾ ಪ್ರಾಸದಾಯಿಕ ಗೆಲುವನ್ನು ಕಂಡಿದ್ದು ಎಲ್ಲೂ ಮೋದಿ ಯುಗ ಮುಗಿಯುತ್ತೀದೆಯೇ ಎಂಬಂತೆ ಭಾಸವಾಗಿತ್ತು.ಒಟ್ಟಾರೆ ಈ ಬಾರಿ ಬಿಜೆಪಿಗೆ ನಿರೀಕ್ಷಿಸಿದಷ್ಟು ಸೀಟು ಬಾರದೇಹೋಗಿರುವುದು ವಿಪರ್ಯಾಸ. ಏನೇ ಇರಲಿ ಬಿಜೆಪಿ ನೇತೃತ್ವದ ಏನ್ ಡಿ ಎ ಸರ್ಕಾರ ಆಳ್ವಿಕೆ ನಡೆಸುವುದು 99 ಪ್ರತಿಶತವೇ ಆದರೂ, ಈ ಸರ್ಕಾರ ಎಷ್ಟು ದಿನ ಇರತ್ತೋ ಗೊತ್ತಿಲ್ಲ. ಸಂಸದೀಯ ಮೀಟಿಂಗ್ ನಲ್ಲಿ ಎನ್ ಡಿ ಎ ಮಿತ್ರ ಪಕ್ಷಗಳು ಸಪೋರ್ಟ್ ಅಂತೂ ಕೊಟ್ಟಿದ್ದಾವೆಯಾದರೂ ,ಯಾವ ಕ್ಷಣದಲ್ಲೂ ಬೇಕಾದರೂ ತಮ್ಮ ನಡವಳಿಕೆಯನ್ನು ಬದಲಾವಣೆ ಮಾಡು ಬಹುದು ಎಂಬುದು ಕೂಡಾ ಅಷ್ಟೇ ಸತ್ಯ. ಉತ್ತಮ,ದೊಡ್ಡ ಮಟ್ಟದ ಸ್ಥಾನ ಮಾನದ ಆಕಾಂಕ್ಷಿಗಳೆಲ್ಲವನ್ನೂ ಹೊಂದಿಸಿಕೊಂಡು ಆಡಳಿತ ನೆಡೆಸುವುದು ಕೊಡ ಅಷ್ಟು ಸುಲಭದ ಮಾತು ಅಲ್ಲವೇ ಅಲ್ಲಾ ಸ್ವತಂತ್ರವಾಗಿ ನಿರ್ಣಾಯ ತೆಗೆದುಕೊಳ್ಳಲು ಸಾಧ್ಯವಿಲ್ಲ ಇನ್ನು ಕಾಂಗ್ರೆಸ್ ಪಕ್ಷವೂ ಇಂಡಿಯಾ ಮೈತ್ರಿ ಕೂಟದಲ್ಲಿ ಸಾಕಷ್ಟು ಪಾರ್ಟಿಗಳಿದ್ದೂ ಅವರೆಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರ ರಚಿಸುವುದು ಜೊತೆಗೆ ಐದು ವರ್ಷಗಳ ಕಾಲ ನಿರ್ವಹಿಸುವುದು ಅಸಾಧ್ಯವೇ ಸರಿ.! ಏನೇ ಇರಲಿ ಸಧ್ಯದ ಮಾಹಿತಿ ಪ್ರಕಾರ ನರೇಂದ್ರ ಮೋದಿ ಮೂರನೇ ಬಾರಿಗೆ ಇದೆ ಭಾನುವಾರ ಜೂನ್ 9ರ ಸಂಜೆ ಪ್ರಮಾಣ ವಚನ ಸ್ವೀಕಾರ ಮಾಡುತ್ತಾರೆ ಎಂಬ ಮಾಹಿತಿ ಇದ್ದರೂ ಅದೆಷ್ಟು ಸತ್ಯವೊ ಕಾದು ನೋಡಬೇಕಾಗಿದೆ.

ಗುರುವಾರ, ಸೆಪ್ಟೆಂಬರ್ 14, 2023

ಧರ್ಮಸ್ಥಳ ಸೌಜನ್ಯ ಪ್ರಕರಣ ಅಂದಿನಿಂದ ಇಂದಿನವರೆಗೆ….!! ಮುಂದೆ??

ಸೌಜನ್ಯ ದೌರ್ಜನ್ಯ ನತ ದ್ರಷ್ಟ ಸೌಜನ್ಯ ಎಂಬ ವಿದ್ಯಾರ್ಥಿನಿಯು ಘೋರ,ಭಯಾನಕವಾಗಿ ಪೈಶಾಚಿಕ ರೀತಿಯಲ್ಲಿ ಅತ್ಯಾಚಾರಗೊಂಡು ಹತ್ಯೆಯಾಗಿ ಸರಿ ಸುಮಾರು ಹನ್ನೊಂದು ವರ್ಷಗಳೇ ಕಳೆದು ಹೋಗಿದೆ.ಇಂದಿಗೂ ನೈಜ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ನಮ್ಮಲ್ಲಿನ ಕಾನೂನು ವ್ಯವಸ್ಥೆ,ತನಿಖಾ ಸಂಸ್ಥೆಯಿಂದ ಆಗದೇ ಹೋಯಿತು, ಸುದೀರ್ಘ ಹನ್ನೊಂದು ವರ್ಷಗಳ ಬಳಿಕ ಬಂದ ಕೋರ್ಟ್ ತೀರ್ಪು ಅಸಮಾಧಾನದಿಂದ ಕೂಡಿತ್ತು ಹಾಗೂ ಮತ್ತೆ ಸೌಜನ್ಯ ಸುದ್ದಿ ಗರಿಗೆದರುವಂತೆ ಮಾಡಿಬಿಟ್ಟಿತು.ಸಾಮಾಜಿಕ ಹೋರಾಟಗಾರ ಮಹೇಶ್ ಶೆಟ್ಟಿ ತಿಮ್ಮರೊಡಿ, ಸಂತ್ರಸ್ತೆಯ ಕುಂಟುಂಬಸ್ಥರನ್ನು ಕಟ್ಟಿಕೊಂಡು ರಾಜ್ಯಾದ್ಯಂತ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ, ಒಂದಷ್ಟು ಒಳ್ಳೆ/ಕೆಟ್ಟಮನಸ್ಸುಗಳೂ ಇದಕ್ಕೆ ಕೈ ಜೋಡಿಸಿವೆ . ಈ ಪ್ರಕರಣವನ್ನು ಆರಂಭದಲ್ಲಿ ಅಕ್ಟೋಬರ್ 2012ರಲ್ಲಿ ದಾಖಲಿಸಲಾಯಿತು,ಬೆಳ್ತಂಗಡಿ ಪೊಲೀಸರು ತನಿಖೆ ನಡೆಸಿದರು ನಂತರ ಅದನ್ನು ನವೆಂಬರ್ 2013 ರಲ್ಲಿ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಸಿಬಿಐ), ಚೆನ್ನೈನ ವಿಶೇಷ ಅಪರಾಧ ವಿಭಾಗವು ವಹಿಸಿಕೊಂಡಿತು. 2016ರಲ್ಲಿ ತನಿಖೆ ಪೂರ್ಣಗೊಳಿಸಿ ಸಿಬಿಐ ವರದಿ ಸಲ್ಲಿಸಿತ್ತು. ಜೂನ್ 16 ರ ಆದೇಶದಲ್ಲಿ, ನ್ಯಾಯಾಧೀಶ ಸಿಬಿ ಸಂತೋಷ್, ಆರೋಪಿ ಮತ್ತು ಅಪರಾಧಕ್ಕೆ ಸಂಬಂಧಿಸಿದಂತೆ ಯಾವುದೇ ಸೂಕ್ತ ಸಾಕ್ಷಿಗಳಿಲ್ಲದಿರುವುದ ಬಗ್ಗೆ ತೀರ್ಪು ನೀಡಿದ್ದರು. ಅದೇ ಈಗ ಪುನಃ ಸೌಜನ್ಯಾ ಪ್ರಕರಣ ಜೀವ ಪಡೆಯುವುದಕ್ಕೆ ಕಾರಣೀಭೂತವಾಗಿದೆ.ಅಪರಾಧಿ ಎಂದು ಬಂಧಿಸಲ್ಪಟ್ಟು 6 ವರ್ಷ ಜೈಲು ಪಾಲಾಗಿ,ಜಾಮೀನಿನ ಮೂಲಕ ಹೊರಗೆ ಬಂದ ಸಂತೋಷ್ ರಾವ್, ನಿರಪರಾಧಿ ಎಂಬ ತೀರ್ಪು ಮೇಲ್ನೋಟಕ್ಕೆ ಕೋರ್ಟ್ ತೀರ್ಪಿನ ಪ್ರತಿಯಲ್ಲಿ ಗೊತ್ತಾಗಿದ್ದೇ ತಡ, ಹೋರಾಟಗಾರರಿಗೆ ಹಾಗೂ ಸಂತ್ರಸ್ತೆಯ ಕುಟುಂಬಿಕರಿಗೆ ಸಂತಸ ತಂದರೂ, ನಿಜವಾದ ಅಪಾಧಿಗಳು ಯಾರು ಅವರನ್ನು ಬಂಧಿಸಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟಿತ್ತು. ಹೌದು! ಹಾಗಾದರೆ ಅಪರಾಧಿಯಾರು? ಹತ್ಯಾಚಾರವಾದದ್ದು ಸತ್ಯ ಅಪರಾಧಿ ಇರುವುದು ಕೂಡ ಅಷ್ಟೇ ಸತ್ಯ! ಏನಿದು ಘಟನೆ? ಅದು 2012, 9ರ ಜೂನ್ ನಲ್ಲಿ ನಡೆದ ಘನ ಘೋರ ಘಟನೆ.ಎಂದಿನಂತೆ ಸಂಜೆ 4:30 ಸಮಯಕ್ಕೆ ಉಜಿರೆಯ ಎಸ್ಡಿಎಂ ಕಾಲೇಜಿನಿಂದ ಧರ್ಮಸ್ಥಳ ಗ್ರಾಮದ ಪಾಂಗಾಳಕ್ಕೆ ತನ್ನ ಮನೆಗೆ ಹೆಜ್ಜೆ ಹಾಕುತ್ತಿದ್ದ ಪಿಯುಸಿ ಓದುತ್ತಿದ್ದ 17 ವರ್ಷದ ಸೌಜನ್ಯ ಎನ್ನುವ ವಿದ್ಯಾರ್ಥಿನಿ ಮನೆಗೆ ಸೇರಿರಲಿಲ್ಲ.ಬಸ್ ನ್ನು ಇಳಿದು ಮನೆ ಕಡೆ ಹೋಗುತ್ತಿದ್ದ ಈಕೆಯನ್ನು ಕಂಡವರು ಇದ್ದಾರೆ ಸ್ವತಃ ಆಕೆಯ ಮಾವ ವಿಠ್ಠಲ ಗೌಡ ನೋಡಿದ್ದೂ,ವಿಶ್ ಕೂಡಾ ಮಾಡಿದ್ದರು ಅಂತೆ, ಆದರೆ ಮನೆಗೆ ಮಾತ್ರ ಆಕೆ ಹೋಗಲಿಲ್ಲ! ಅಲ್ಲಿ, ಇಲ್ಲಿ, ಎಲ್ಲಾ ಕಡೆ ಹುಡುಕಿದರೂ, ಸೌಜನ್ಯಾ ಇರುವಿಕೆ ಅರಿಯದೇ ಸ್ವಾಭಾವಿಕವಾಗಿ ಟೆನ್ಷನ್ ಗೆ ಒಳಗಾಗಿದ್ದರು ಕುಟುಂಬದ ಸದಸ್ಯರು.ಹುಡುಗಾಟ ಪ್ರಾರಂಭವಾಯಿತು ಇಡೀ ರಾತ್ರಿ ಶೋಧ ನಡೆಸಿದರೂ, ಸೌಜನ್ಯಳ ಸುಳಿವು ಸಿಕ್ಕಿರಲಿಲ್ಲ.ಮರುದಿನ ಅದೇ ಪ್ರದೇಶಕ್ಕೆ ಹೊಂದಿಕೊಂಡಂತೆ ಮುಖ್ಯ ರಸ್ತೆಯ ಕೂಗಳತೆಯ ದೂರದಲ್ಲಿ ಸೌಜನ್ಯಳ ಶವ ಪತ್ತೆಯಾಗುತ್ತದೆ. ದೇಶದ ನಾಗರಿಕ ಸಮಾಜ ತಲೆ ತಗ್ಗಿಸುವಂತ ರೀತಿಯಲ್ಲಿ ಕಂಡು ಬರುತ್ತದೆ ಆ ನೋಟ.ಅತ್ಯಾಚಾರ ಎಸಗಿದ್ದೂ ಮಾತ್ರ ಅಲ್ಲದೆ ತನ್ನ ಕ್ರೌರತೆ, ಮ್ರಗರತೆಯನ್ನು ಮರೆದ್ದರು ದುಷ್ಟರು. ಶವ ಸಿಕ್ಕ ಸ್ಥಿತಿಯನ್ನು ಬಿಡಿಸಿ, ಬಿಡಿಸಿ ವಿವರಿಸಿ ಹೇಳಬೇಕಾದ ಅಗತ್ಯವಿಲ್ಲ ಇಡೀ ರಾಜ್ಯಕ್ಕೆ ಅದಾಗಲೇ ಗೊತ್ತಿರುವ ವಿಷಯ.ದೌರ್ಜನ್ಯ ವಿರೋಧಿಸಿ ಆರೋಪಿಗಳನ್ನು ಬಂಧಿಸುವಂತೆ ಪ್ರತಿಭಟನೆ ನಡೆಯುತ್ತದೆ., ಹರತಾಳ ಮುಗಿಲು ಮುಟ್ಟುತ್ತದೆ ಈತನ್ಮಧ್ಯೇ ಬೆಳ್ತಂಗಡಿಯ ಹಿಂದೂ ಹುಲಿ ಎಂದು ಗುರುತಿಸಲ್ಪಟ್ಟ ಮಹೇಶ್ ಶೆಟ್ಟಿ ತಿಮ್ಮರೊಡಿ ಅಚಾನಕ್ಕಾಗಿ ಈ ಪ್ರಕರಣದಲ್ಲಿ ಕಾಣಿಸಿಕೊಂಡು, ಸೌಜನ್ಯ ಕುಟುಂಬಸ್ಥರ ಜೊತೆ ಪ್ರತಿಭಟನೆಗೆ ಇಳಿದು ಬಿಡುತ್ತಾರೆ.
ಕೃತ್ಯ ನಡೆದ ಸ್ಥಳದಿಂದ ಸುಮಾರು ಒಂದೂವರೆ ಕಿಮೀ ದೂರದಲ್ಲಿರುವ ಬಾಹುಬಲಿ ಬೆಟ್ಟದಲ್ಲಿ ಸಂಜೆಯ ಸಮಯದಲ್ಲಿ ಭಿಕ್ಷುಕನ ರೀತಿಯಲ್ಲಿ ನಿಂತಿದ್ದ ಸಂತೋಷ್ ರಾವ್ ಎಂಬಾತನ್ನು ಈ ಪ್ರಕರಣದಲ್ಲಿ ಹೋರಾಟಗಾರರು ಆರೋಪಿಸಿರುವ ನಾಲ್ಕು ಮಂದಿಯ ಪೈಕಿ ಮಲ್ಲಿಕ್ ಜೈನ್ ಜೊತೆಗೆ,ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸುತ್ತಾರೆ.ಈತನೇ ಸೌಜನ್ಯ ರೇಪ್ ಅಂಡ್ ಮರ್ಡರ್ ಮಾಡಿದ್ದು ಎಂದೂ ಆತನನ್ನು ಜೈಲ್ ನ ಕಂಬಿ ಹಿಂದೆ ತಳ್ಳುತ್ತಾರೆ., ಹೋರಾಟಗಾರರು ಹಾಗೂ ಸೌಜನ್ಯ ಮನೆಯವರು ಈತ ನಿರಾಪರಾಧಿ ಇದರ ಹಿಂದೆ ಬೇರೆ 4 ಜನರು ಇದ್ದಾರೆ ಎಂದು ಅವರ ಹೆಸರನ್ನುಬಹಿರಂಗ ಪಡಿಸುತ್ತಾರೆ . ಆ ಆರೋಪಿಗಳು ಪಾರಾಗಲು ಸಂತೋಷ್ ರಾವ್ ಎನ್ನುವ ಮುಗ್ದ, ಮಾನಸಿಕ ರೋಗಿ ತರಹ ಇರುವ ಈ ವ್ಯಕ್ತಿಯನ್ನು ಪಿಟ್ ಮಾಡಲಾಗಿದೆ ಎಂದೂ ಆರೋಪಿಸುತ್ತಾರೆ. ಸೌಜನ್ಯಳ ಪೋಸ್ಟ್ ಮಾರ್ಟಮ್ ಹಾಗೂ ವಿಧಿ ವಿಜ್ಞಾನ ಪ್ರಯೋಗಾಲಯ ಸೇರಿದಂತೆ ಪೊಲೀಸ್ ತನಿಖೆ ಇನ್ನಿತರ ಚಟುವಟಿಕೆಗಳು ಸರಿಯಾದ ರೀತಿಯಲ್ಲಿ ಆಗಿಲ್ಲ, ಹಾಗೂ ಆರೋಪಿಗಳ ಮೇಲೆ ನಾವು ಕೊಟ್ಟ ದೂರನ್ನು ಪೊಲೀಸರು ಪ್ರಭಾವಿಗಳ ಒತ್ತಡದ ಮೇಲೆ ದಾಖಲಿಸಲಿಲ್ಲ ಎಂಬ ಆರೋಪವನ್ನು ಇಂದಿಗೂ ಮಾಡುತ್ತಾರೆ. ಆರೋಪಿಗಳು ಎಂದು ಹೇಳಲ್ಪಟ್ಟ 4 ಜನರಲ್ಲಿ ಒಬ್ಬ ಧರ್ಮಸ್ಥಳದ ಧರ್ಮಾಧಿಕಾರಿಯ ತಮ್ಮನ ಮಗ ನಿಶ್ಚಲ್ ಜೈನ್, ಅಮೆರಿಕಾದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಆ ಸಮಯದಲ್ಲಿ ಆತ ಊರಿನಲ್ಲಿ ಇರಲೇ ಇಲ್ಲ ಎಂಬ ಸಾಕ್ಷಿ ಸಿಕ್ಕರೂ, ಅದೆಲ್ಲಾ ಫೇಕ್ ಎನ್ನುವುದು ಸೌಜನ್ಯ ಮನೆಯವರ ಉದಾಂಡ ವಾದ .ಇನ್ನುಳಿದ ಮೂವರ ವಿಚಾರಣೆಯಾಗುತ್ತದೆ ಹಾಗೂ ಸ್ವಯಂ ಪ್ರೇರಿತವಾಗಿ ಬ್ರೈನ್ ಮ್ಯಾಪಿಂಗ್ ಗೂ ಒಳಪಡಿಸಲಾಗಿದೆ ಎಂಬ ದಾಖಲೆಯನ್ನೂ ಪ್ರೆಸ್ ಮೀಟ್ ನಡೆಸಿ ಈ ಮೂವರು ಮುಂದಿಡುತ್ತಾರೆ. ಸಿಓಡಿ ಇಂದ ಸಿಬಿಐವರೆಗಿನ ಮೆಟ್ಟಿಲನ್ನೂ, ಹತ್ತಿದ್ದ ಈ ಪ್ರಕರಣ ಕೊನೆಗೂ ಇತ್ತೀಚಿಗೆ ಸಿಬಿಐ ನಿಂದ ತೀರ್ಪು ಬಂದಿತ್ತು ಅಪರಾಧಿ ಎಂದು ಬಿಂಬಿಸಲಾಗಿದ್ದ ಸಂತೋಷ್ ರಾವ್ ಬಗೆಗೆ ಯಾವುದೇ ಸಾಕ್ಷಿ ಆಧಾರಗಳಿಲ್ಲ ಆತ ನಿರಾಪರಾಧಿ ಎಂಬ ದಿಕ್ಕಿನಲ್ಲಿ ಆತನಿಗೆ ಕ್ಲೀನ್ ಚಿಟ್ ಮಾದರಿಯಲ್ಲಿ ತೀರ್ಪು ನೀಡಿತ್ತು.ಇದರಿಂದ ಅತೃಪ್ತಗೊಂಡ ಸೌಜನ್ಯ ಮನೆಯವರು ಹಾಗೂ ಹೋರಾಟಗಾರರು ಪ್ರತಿಭಟನೆಗೆ ಇಳಿದು ಬಿಟ್ಟಿದ್ದಾರೆ.ಸಂತೋಷ್ ರಾವ್ ಅಪರಾಧ ಮಾಡಿಲ್ಲ ಎಂಬುದನ್ನು ನಾವು ಮೊದಲೇ ತಿಳಿಸಿದ್ದೆವು ಅವನು ಖುಲಾಸೆಗೊಂಡಿರುವುದು ನಮಗೆ ಖುಷಿ ತಂದರೂ ,ನೈಜವಾದ ಅಪರಾಧಿಗಳ ಪತ್ತೆಯಾಗಿಲ್ಲ,ತೃಪ್ತಿ ತಂದಿಲ್ಲ ಎಂಬುದನ್ನು ಇಟ್ಟುಕೊಂಡು ನ್ಯಾಯಕ್ಕಾಗಿ ಹೋರಾಟದ ಹಾದಿ ಇಳಿದಿವೆ. ಸಂತೋಷ್ ರಾವ್ ನಿರಪರಾಧಿಯಾದರೇ? ಅಪರಾಧಿಗಳು ಯಾರು? ಸಂತೋಷ್ ರಾವ್ ನಿರಾಪರಾಧಿಯಾದರೇ ಸೌಜನ್ಯರನ್ನು ಪೈಶಾಚಿಕ ಹತ್ಯೆ ಮಾಡಿದ ಆ ಕಾಮಾಂಧರರು ಯಾರು? ಅವರಿಗೆ ಗಲ್ಲು ಶಿಕ್ಷೆಯಾಗಬೇಕು ಸೌಜನ್ಯಳಿಗೆ ನ್ಯಾಯ ಸಿಗಬೇಕು ಎಂದು ಕರಾವಳಿ ಕರ್ನಾಟಕ ಮಾತ್ರವಲ್ಲದೇ ರಾಜ್ಯಾದ್ಯಂತ ತಿಮ್ಮರೊಡಿ ಮಹೇಶ್ ಶೆಟ್ಟಿಯವರ ನೇತೃತ್ವದಲ್ಲಿ ಹೋರಾಟ ನಡೆಯುತ್ತಿದೆ ಅವರ ಜೊತೆಗೆ ಮೈಸೂರಿನ ಒಡನಾಡಿ ಸಂಸ್ಥೆ ಕೂಡ ಕೈ ಜೋಡಿಸಿವೆ. ಮಹೇಶ್ ಶೆಟ್ಟಿ ತಿಮ್ಮರೊಡಿಯವರು ಇದೆ ವಿಚಾರದಲ್ಲಿ ಮುಂಬೈಗೂ ಪ್ರಯಾಣ ಬೆಳೆಸಿ ಅಲ್ಲಿಯೂ ತಮ್ಮ ಪ್ರಖರ ಭಾಷಣವನ್ನು ಬೀಗಿದ್ದೂ ಈಗ ಸಧ್ಯ ಕರಾವಳಿಯಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ಡೆಲ್ಲಿ ತನಕವೂ ಹೋಗಿ ನ್ಯಾಯಕ್ಕಾಗಿ ಹೋರಾಡುವುದು ಎಂದು ಗುಡುಗುತ್ತಿದ್ದಾರೆ.ಅಚ್ಚರಿಯೆಂದರೆ ಈ ಪ್ರಕರಣದಲ್ಲಿ ರಾಜ್ಯಮಟ್ಟದ,ನ್ಯೂಸ್ ಚಾನೆಲ್ ಗಳು ವಿಶೇಷ ಸುದ್ದಿ ಮಾಡದೇ ಇರುವುದು ಜೊತೆಗೆ ದೊಡ್ಡ ದೊಡ್ಡ ನ್ಯೂಸ್ ಪೇಪರ್ ಗಳೂ ಸಹಾ ಕೈ ಜೋಡಿಸದೇ ಇರುವುದು., ಕೇವಲ ಪ್ರತಿಭಟೆನಾ ಸಭೆಯ ವರದಿ ಸಣ್ಣ ಕಾಲಂನಲ್ಲಿ ಜಾಗ ಪಡೆಯುತ್ತಿದೆ ಅಷ್ಟೇ.ಆದರೆ ಹಲವಾರು ಯೌಟ್ಯೂಬ್ ಚಾನೆಲ್ ಗಳು ಎಪಿಸೋಡ್ ಮೇಲೆ ಎಪಿಸೋಡ್ ಮಾಡುತ್ತಿವೆ ವಿಪರ್ಯಾಸವೆಂದರೆ ಯೌಟ್ಯೂಬ್ ನಿಂದ ಲೀಗಲ್ ನೋಟಿಸ್ ಜಾರಿಯಾಗುತ್ತಿದೆಯಂತೆ ಸೌಜನ್ಯಳಿಗೆ ಸಂಬಂದಿಸಿದ ವರದಿ ಪ್ರಕಟವಾಗಬಾರದು ಎಂದು., ಹಾಗೂ ವಿಡಿಯೋಗಳೆಲ್ಲಾ ತನ್ನಷ್ಟೇ ಡಿಲೀಟ್ ಕೂಡ ಆಗುತ್ತಿವೆಯಂತೆ ಇದು ಒಂದು ರೀತಿಯ ಪ್ರಭಾವದ ಫಲ ಎಂದೂ ಹೇಳಲಾಗುತ್ತಿದೆ. ಧರ್ಮಾಧಿಕಾರಿಗಳನ್ನು ದೂರುದೇತಕ್ಕೆ? ಪ್ರತಿಭಟನೆಕಾರರು ಸೌಜನ್ಯಳಿಗೆ ನ್ಯಾಯ ಸಿಗಬೇಕು ಎಂಬ ವಿಚಾರ ಇಟ್ಟುಕೊಂಡು ಹೋರಾಟ ನಡೆಸದೇ ಧರ್ಮಸ್ಥಳ ಕ್ಷೇತ್ರ ಹಾಗೂ ಧರ್ಮಾಧಿಕಾರಿಗಳ ವಿರುದ್ಧ ಅವಹೇಳನಕಾರಿ ಯಾದ ಹೇಳಿಕೆಯನ್ನು ಕೊಡುತ್ತಿದ್ದಾರೆ.ಕ್ಷೇತ್ರದ ಪಾವಿತ್ರತೆಯನ್ನು ಹಾಳು ಕೆಡುವುತ್ತಿದ್ದಾರೆ ಎಂದು ದೇವಸ್ಥಾನದ ಭಕ್ತರು ಹಿತೈಷಿಗಳು ,ಅಭಿಮಾನಿಗಳು ಹೇಳುತ್ತಿದ್ದಾರೆ ಒಂದು ಲೆಕ್ಕದಲ್ಲಿ ಇದು ಸರಿ ಅನ್ನಿಸಿದರೂ ,ಇನ್ನೊಂದು ಕಡೆಯಲ್ಲಿ ದೇವಸ್ಥಾನಕ್ಕೆ ಸಂಬಂಧಿಸಿದವರು ಮುಖ್ಯವಾಹಿನಿಗೆ ಬಂದು ಒಂದು ಉತ್ತಮ ಹೇಳಿಕೆಯನ್ನು ಕೊಡುವುದು ಹಾಗೂ ಸಭೆ,ಪ್ರತಿಭಟನೆಯಲ್ಲಿ ಇರುವಿಕೆಯನ್ನು ತೋರ್ಪಡಿಸದೇ ಇರುವುದು ಹೋರಾಟಗಾರರಿಗೆ ವಸ್ತು ಆಗುತ್ತಿರುವುದು ಎನ್ನುವುದು ನನ್ನ ಅಭಿಪ್ರಾಯ ! ದೇಶದ ಪ್ರಾಚೀನ, ಜನಪ್ರೀಯ, ಪಾವಿತ್ರತ್ಯೆಯ ಕ್ಷೇತ್ರಲ್ಲಿ ಸ್ಥಾನ ಪಡೆದ ಧರ್ಮಸ್ಥಳ ಇದು ಪುಣ್ಯ ಕ್ಷೇತ್ರವಾದರೂ ಅದೊಂದು ಗ್ರಾಮ.ಈ ಗ್ರಾಮಕ್ಕೆ ಸಂಬಂಧ ಪಟ್ಟಲ್ಲಿ ಘಟನೆ ನೆಡದಿರುವುದು. ಸಂತ್ರಸ್ತೆ ವ್ಯಾಸಂಗ ಮಾಡುತ್ತಿರುವ ಕಾಲೇಜು ಕೂಡಾ ಧರ್ಮಸ್ಥಳ ಸಂಸ್ಥೆಗೆ ಒಳಪಟ್ಟದ್ದು ಹಾಗೂ ಅಲ್ಲಿ ಕೆಲಸ ನಿರ್ವಹಿಸುತ್ತಿರುವವರ ಮೇಲೆ ಆರೋಪ ಬಂದಿರುವ ಕಾರಣ ದಿಂದಲಾದರೂ ,ಇದಕ್ಕೆಲ್ಲಾ ತೆರೆ ಎಳೆಯಲು ಧರ್ಮಸ್ಥಳ ಧರ್ಮಾಧಿಕಾರಿ ,ಪೂಜ್ಯರು, ಖಾವಂದರು, ಮಾತನಾಡುವ ಮಂಜುನಾಥ ಎಂದೇ ಹೆಸರು ಪಡೆದಿರುವ ಡಿ.ವೀರೇಂದ್ರ ಹೆಗ್ಗಡೆಯವರು ಆಟ್ಲಿಸ್ಟ್ ಒಂದಾದರೂ ಬಹಿರಂಗ ಸಭೆಯಲ್ಲಿ ಪಾಲ್ಕೊಂಡಿದ್ದರೇ, ಕ್ಷೇತ್ರಕ್ಕೆ ಮತ್ತು ಅವರಿಗೆ ಗೌವರ ಸಲ್ಲುತ್ತಿತ್ತು,ಸಾಕಷ್ಟು ನಮ್ಮಂತ ಅಭಿಮಾನಿಗಳಿಗೆ,ಇನ್ನು ಹೋರಾಟಗಾರರಿಗೆ, ಟೀಕಾಗಾರರಿಗೂ ಚಾಟಿ ಏಟು ಸಿಗುತ್ತಿತ್ತು.ಇದೆಕ್ಕೆಲ್ಲಾ ಉತ್ತರ ಕೊಡುತ್ತಾ ಈ ಸಭೆ.ಹೋರಾಟಗಳಿಗೆ ತೆರಳಲು ಸಮಯದ ಕೊರತೆ ಹಾಗೂ ಅದು ಅವರ ಕರ್ತ್ಯವ್ಯಪರತೆಗೆ ನಿಲುಕದ್ದು .ಸಣ್ಣ ಸೌಜನ್ಯಕ್ಕಾದರೂ,ನಾಡಿನ ಏಳಿಗೆಯನ್ನು ಬಯಸುತ್ತಿರುವ,ಬೆಸೆಯುತ್ತಿರುವ ಮನೋಭಾವನೆಯಲ್ಲಿರುವ ಪೂಜ್ಯರು ರಾಜ್ಯಾದ್ಯಾ೦ತ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಸ್ವ ಸಹಾಯ ಸ್ತ್ರೀಸಂಘಗಳ ಮೂಲಕ ಮಹಿಳೆಯರಿಗೆ ಸ್ವಾವಲಂಭಿ ಸ್ಥಿರತೆಯನ್ನು ಕಲ್ಪಿಸಿರುವವವರು. ಈ ಸೌಜನ್ಯ ವಿಚಾರವು ಇಷ್ಟೊಂದು ದೊಡ್ಡ ಮಟ್ಟದಲ್ಲಿ ಸದ್ದು ಪಡೆಯುತ್ತಿರುವುದರಿಂದ ತನ್ನ ಇರುವುಕೆಯನ್ನು ತೋರ್ಪಡಿಸಬೇಕಿತ್ತು ಎಂಬುದು ಹಲವರ ಅಭಿಪ್ರಾಯ. ಸಿಬಿಐಗೆ ಈ ಪ್ರಕರಣವನ್ನು ವಯಿಸುವಲ್ಲಿ ಧರ್ಮಾಧಿಕಾರಿಗಳ ಪಾತ್ರವೂ ದೊಡ್ಡದು ಇದೆ ಎಂಬುದನ್ನುಇಲ್ಲಿ ಸ್ಮರಿಸಿಕೊಳ್ಳಬೇಕು! ಅವರು ಅಂದು ಸಿಬಿಐಗೆ ವರ್ಗಾಹಿಸುವುದಕ್ಕೆ ಗ್ರಹ ಮಂತ್ರಿಗಳಾಗಿದ್ದ ಆರ್ ಅಶೋಕ್ ಅವರಿಗೆ ಪತ್ರವನ್ನೂ ಬರೆದಿದ್ದರು.ಎಲ್ಲೋ ಭೌತಿಕವಾಗಿ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡಿದ್ದರೇ ಅವರ ಕೀರ್ತಿಮಕುಟಕ್ಕೆ ಇನ್ನೊಂದು ಗರಿ ಸಿಗುತ್ತಿತ್ತು! ಸಂತೋಷ್ ರಾವ್ ನಿಜವಾಗಿಯೂ ಕ್ರತ್ಯ ಎಸಗಿರಬಹುದೇ? ಆತ ಪೋಲೀಸರ ಮುಂದೆ ಹೌದು ನಾನೇ ಮಾಡಿದ್ದು ಎಂದು ಒಪ್ಪಿಕೊಂಡಿದ್ದು ಯಾಕೆ? ಆತನ ಮೈ ಮೇಲೆ ಪರಚಿದ ಗಾಯಗಳು ಸೌಜನ್ಯಳದ್ದೇ? ಆತ ಬಾಹುಬಲಿ ಬೆಟ್ಟದಲ್ಲಿ ಸಿಕಿದ್ದಾಗ ಇಲ್ಲೇನು ಮಾಡುತ್ತಿದ್ದೆ ಎಂದು ದೇವಸ್ಥಾನದ ಸಿಬ್ಬಂದಿ ಕೇಳಿದಾಗ ಇನ್ನಿಬ್ಬರು ಇದ್ದಾರೆ ಅವರಿಗಗಾಗಿ ಕಾಯುತ್ತಿದ್ದೇನೆ ಎಂದವನು ಕ್ಷಣ ಮಾತ್ರದಲ್ಲಿ ವಿಚಿತ್ರಕಾರಿಯಾಗಿ ಅಲ್ಲಿಂದ ಓಡಿ ಹೋಗಲು ಪ್ರಯತ್ನಪಟ್ಟಿದ್ದು ಯಾಕೆ? ಸೌಜನ್ಯಳ ಮಾವನ ಹೋಟೆಲ್ ನಿಂದ ಪ್ರತಿದಿನ 3 ಪಾರ್ಸೆಲ್ ಊಟ ತೆಗೆದು ಕೊಂಡು ಹೋಗುತ್ತಿದ್ದುನಿಜವೇ? ಕರಾಟೆ ಬ್ಲಾಕ್ ಬೆಲ್ಟ್ ಆಗಿಯೂ, ಮಾನಸಿಕ ವ್ಯಕ್ತಿ ತರಹ ಗೋಚರಿಸುತ್ತಿದ್ದ ಈತ, ನಿಜಕ್ಕೂ ನಾಟಕವಾಡುತ್ತಿದ್ದಾನೆಯೇ? ಬ್ರೈನ್ ಮ್ಯಾಪಿಂಗ್ ಗೆ ಯಾಕೆ ಒಪ್ಪಿಕೊಂಡಿಲ್ಲ? ಲೈಂಗಿಕ ಸಾಮರ್ಥ್ಯವಿಲ್ಲಾ ಎಂದು ಹೇಳಲಾಗುತ್ತಿದ್ದರೂ ಈತ ಈ ಹಿಂದೆ ಅತ್ಯಾಚಾರಕ್ಕೆ ಪ್ರಯತ್ನಿಸಿ ವಿಫಲಗೊಂಡಿದ್ದು ಸುದ್ದಿಯಾಗಿದ್ದು ಸುಳ್ಳಾ?ಸಂತೋಷ್ ರಾವ್ ನಿಜವಾಗಿಯೂ ಕ್ರತ್ಯ ಎಸಗಿರಬಹುದು ಎನ್ನುವುದಕ್ಕೆ ಕೆಲವೊಂದು ಸಾಕ್ಷಿ ಒದಗಿಸುತ್ತಿವೆಯಾದರೂ,ಯಾವುದನ್ನೂ ಸತ್ಯ ಎಂದು ಒಪ್ಪುವಂತಿಲ್ಲ.ಒಂದು ಲೆಕ್ಕಚಾರದಲ್ಲಿ ಸೌಜನ್ಯಳನ್ನು ರೇಪ್ ಅಂಡ್ ಮರ್ಡರ್ ಮಾಡಿ ಆತ ಮರುದಿನ ಅಂದ್ರೆ ಕ್ರತ್ಯ ನಡೆದ ಸ್ಥಳದಿಂದ ಸುಮಾರು ಒಂದೂವರೆ ಕಿಮೀ ದೂರದಲ್ಲಿರುವ ಬಾಹುಬಲಿ ಬೆಟ್ಟದಲ್ಲಿ ಕಾಣಸಿಗುತ್ತಾನೆ ಅಲ್ಲಿಯೇ ಆತನನ್ನು ಹೋರಾಟಗಾರರು ಹೇಳುತ್ತಿರುವ ಆರೋಪಿಗಳ ಪೈಕಿ ಮಲ್ಲಿಕ್ ಜೈನ್ ಹಿಡಿದು ಸ್ಥಳಿಯರ ಸಹಕಾರ ದಿಂದ ಪೊಲೀಸರಿಗೆ ಒಪ್ಪಿಸುತ್ತಾರೆ ಅಂದರೆ ಸಂತೋಷ್ ರಾವ್ , ಹತ್ಯಾಚಾರ ಮಾಡಿ ಅಲ್ಲಿಯೇ ಇರಲು ಸಾಧ್ಯವೇ? ಆತ ಅಲ್ಲಿಂದ ಬೇರೆಕಡೆ ಸ್ಥಳಾಂತರ ಆಗಬೇಕಿತ್ತು ಅಲ್ವೇ ? ಇನ್ನು ಆತ ಅಲ್ಲಿ ಹೇಳಿದ್ದು ಇನ್ನಿಬ್ಬರು ಇದ್ದಾರೆ ಅವರನ್ನು ಕಾಯುತ್ತೀದ್ದೇನೆ ಎಂದವನು ದಿಢೀರ್ ಎಂದು ಓಟಕ್ಕಿತ್ತಿದ್ದು ಯಾಕೆ? ನಿಜವಾಗಿಯೂ ಅಲ್ಲಿ ಆತನ ಜೊತೆ ಇನ್ನಿಬ್ಬರು ಇದ್ದಿದ್ದಾರೆಯೇ? ಇದ್ದಿರಲೂ ಬಹುದು ಎಂಬ ಅಂಶ ಒಂದೆಡೆ ಸಂಶಯ ಮೂಡಿಸುತ್ತದೆ ಕಾರಣ ಆತನ ಘಟನೆ ನಡೆಯುವುದರ ಮೊದಲು 2-3 ದಿನಗಳಿಂದ ಸೌಜನ್ಯ ಮಾವ ವಿಠ್ಠಲ್ ಗೌಡ ಅವರ ಹೋಟೆಲ್ ನಿಂದ ಮೂರು ಊಟ ಪಾರ್ಸೆಲ್ ತಗೆದು ಕೊಂಡು ಹೋಗುತ್ತಿದ್ದದ್ದು, ಹಾಗೂ ಪೋಸ್ಟ್ ಮಾರ್ಟಮ್ ಮಾಡಿದ ವೈದ್ಯರ ಪ್ರಥಮ ಹಂತದ ಹೇಳಿಕೆಯಲ್ಲಿ ಇದನ್ನು ಒಬ್ಬ ವ್ಯಕ್ತಿಯಿಂದ ಮಾಡಲು ಅಸಾಧ್ಯ, ಗ್ಯಾಂಗ್ ರೇಪ್ ಆಗಿರುವ ಸಾಧ್ಯತೆಗಳಿವೆ ಎಂಬಾವುಗಳೆಲ್ಲಾ ಈತನೇ ಅಪರಾಧಿ ಎನ್ನುವುದಕ್ಕೆ ಪುಷ್ಟಿ ನೀಡುತ್ತಿವೆ.ಇನ್ನು ಆತ ಪೋಲೀಸರ ಮುಂದೆ ಸತ್ಯ ಒಪ್ಪಿಕೊಂಡಿದ್ದ ಎಂಬ ಮಾತು ಕೂಡ ಕೇಳಿಬರುತ್ತಿದೆ. ನಾನೇ ಮಾಡಿದ್ದು ಎಂದು ಅಪಹರಿಸಿದ ರೀತಿಯನ್ನೂ ಸಹ ಆತ ಸಂಕ್ಷಿಪ್ತವಾಗಿ ಪೊಲೀಸರಿಗೆ ತಿಳಿ ಹೇಳಿದ್ದನಂತೆ .ಕ್ರತ್ಯ ನಡೆದ ಸ್ಥಳಕ್ಕೆ ತೆರಳಬೇಕಾದರೆ ಎರಡು ಮಾರ್ಗಳು., ಒಂದು ಸುತ್ತು ಬಳಿಸಿ ಸಾಗಬೇಕಾದರೇ ಇನ್ನೊಂದು ರಸ್ತೆ ಒಂದು ಹರಿಯುವ ತೊರೆಯನ್ನು ದಾಟಿ ಹೋಗಬೇಕು., ಅದು ಮಳೆಗಾಲದ ಸಮಯವಾದುದ್ದರಿಂದ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತದೆ ಅದನ್ನು ದಾಟಿ ಸಾಗುವುದು ಅಷ್ಟು ಸುಲಭವಲ್ಲ ಎನ್ನಲಾಗುತ್ತದೆ. ಸಂತೋಷ್ ಆ ತೊರೆಯನ್ನು ದಾಟಿ ಅವಳನ್ನು ಎತ್ತಿ ಹೋಗಿದ್ದಾನೆಂದು, ಇನ್ನು ಅದರ ಪಕ್ಕದಲ್ಲಿ ಪ್ರಕ್ರತಿ ಚಿಕಿಸ್ಥಳಾಯ ಇದ್ದೂ, ಅದರ ವಾಚ್ ಮೆನ್ ನ ದ್ರಷ್ಟಿ ಮರೆಮಾಚಲು ಸಣ್ಣ ತಿರುವು ಇರುವುದರಿಂದ ಸುಲಭವಾಗಿತ್ತು ಎಂದೂ ಬಾಯಿ ಬಿಟ್ಟ ವಿಚಾರ ಪೊಲೀಸ್ ದಾಖಲಾತಿಯಲ್ಲಿಇದೆಯಂತೆ. ಆತನ ಪರವಾಗಿರುವ ಲಾಯರ್ ಮೋಹಿತ್ ಕುಮಾರ್ ಇದೆಲ್ಲಾ ಸುಳ್ಳು ಪೊಲೀಸರು ಬೆದರಿಸಿ ಹಲ್ಲೆ ಮಾಡಿದ್ದರ ತರುವಾಯ ಆತ ಹೀಗೆ ಒಪ್ಪಿಕೊಂಡು ಹೇಳಿದ್ದಾನೆ ಎಂದು ಆರೋಪ ಮಾಡುತ್ತಾರೆ.ಕೆಲವೊಂದು ಮೂಲಗಳ ಪ್ರಕಾರ ಆತ ಮಾನಸಿಕ ಅಸ್ವಸ್ಥ ಅಲ್ಲವೇ ಅಲ್ಲ ಆತ ಆ ತರಹ ನಾಟಕ ಮಾಡಿಕೊಂಡಿರುವವನು ,ತೀರ್ಥ ಕ್ಷೇತ್ರಗಳ ಸುತ್ತುವ ಭಕ್ತಿ,ಬಯಕೆಯನ್ನು ಹೊಂದಿರುವ ಈತ ಆದಾಗಲೇ ಶಬರಿ ಮಾಲೆ ಯಾತ್ರೆಗೆ ವ್ರತ ನಿರತನಾಗಿದ್ದನಂತೆ ಅದಕ್ಕೆ ಗಡ್ಡ ಮೀಸೆ ಹಾಗೂ ಕೂದಲುಗಳನ್ನು ಬಿಟ್ಟಿದ್ದ.ಕಾರ್ಕಳದ ಅಯ್ಯಪ್ಪ ಮಾಲಾಧಾರಿಗಳ ಜೊತೆ ಅಲ್ಲಿನ ಶಿಬಿರದಲ್ಲಿದ್ದ ಆತ ಆಗಾಗ ಧೂಮಪಾನವನ್ನು ಮಾಡುತ್ತಿದ್ದನಂತೆ ಇದನ್ನು ಕಣ್ಣಾರೆ ಕಂಡ ಉಳಿದ ವ್ರತಧಾರಿಗಳು ಸಾಕಷ್ಟು ಸಾರಿ ಆತನಿಗೆ ಬುದ್ದಿ ಹೇಳಿದರೂ, ಕೇಳಿಸಿ ಕೊಳ್ಳದ ಆತ ನನ್ನು ಅಲ್ಲಿಂದ ಬೀಳ್ಕೊಟ್ಟಿದ್ದರು ಎಂದು ಆತನ ಜೊತೆಗಿದ್ದ ಮಾಲಾಧಾರಿಯೊಬ್ಬರ ಹೇಳಿಕೆಯಿಂದ ತಿಳಿಯುತ್ತಿದೆ. ಕರಾಟೆಯಲ್ಲಿ ಬ್ಲಾಕ್ ಬೆಲ್ಟ್ ನ್ನು ಹೊಂದಿರುವವನು, ಇಂಜಿನಿಯರಿಂಗ್ ಪದವಿ ಪಡೆದು ಸಬ್ ಕಾಂಟ್ರಾಕ್ಟರ್ ಆಗಿ ಉದ್ಯೋಗ ನಿಭಾಯಿಸಿದ ವ್ಯಕ್ತಿ. ಕರಾಟೆ ಪಟುವಾಗಿದ್ದರಿಂದ ಈತ ನಿಂದ ಅತ್ಯಾಚಾರ ಕೊಲೆ ಮಾಡಲು ಸಾಧ್ಯತೆಗಳಿರಬಹುದು ಎಂಬ ಅಭಿವ್ಯಕ್ತಿಯೂ ಇದೆ.ಇನ್ನು ಈತ ಬ್ರೈನ್ ಮ್ಯಾಪಿಂಗ್ ಗೆ ಒಳಪಟ್ಟಿಲ್ಲ., ಕಾರಣ ಆರೋಗ್ಯ ಸ್ತಿಮಿತದಲ್ಲಿ ಇಲ್ಲ ಎಂಬ ಕಾರಣವೊಡ್ಡಿ ಆತನ ಪರ ಅಡ್ವಕೇಟ್ ಹೇಳಿದ್ದರು.ಬೆಂಗಳೂರಿನ ನಿಮಾನ್ಸ್ ನ ಖ್ಯಾತ ಮನೋವೈದ್ಯರು, ಪ್ರೊಫೆಸರ್ ಆಗಿರುವ ಡಾI ಸಿ.ಆರ್.ಚಂದ್ರಶೇಖರ್ ಅವರು ಆತನನ್ನು ಪರಿಶೀಲಿಸಿ, ಆತ ಆರೋಗ್ಯದಲ್ಲಿ ಫೈನ್ ಅಂಡ್ ಫಿಟ್ ನಲ್ಲಿ ಇದ್ದಾನೆ ಎಂಬ ಸರ್ಟಿಫಿಕೇಟ್ ಅನ್ನೂ ಕೊಟ್ಟಿರುತ್ತಾರೆ. ಆದರೂ ಆತ ಮಂಪರು ಪರೀಕ್ಷೆಗೆ ಒಳಗಾಗಿಲ್ಲ ಎಂಬ ಪ್ರಶ್ನೆ ಕಾಡುತ್ತದೆ.!ಆತನ ಮೈ ಮೇಲೆ ಇರುವ ಪರಚಿದ ಗಾಯಗಳು 72ಗಂಟೆಗಳ ಮೊದಲಿನ ಗುರುತುಗಳು ಎಂದು ವ್ಯದ್ಯಕೀಯ ತಪಾಸಣೆ (ಎಫ್ ಎಸ್ ಎಲ್) ಯಲ್ಲಿ ರುಜುವಾತುಗೊಂಡಿರುತ್ತದೆ. ಆತನಿಗೆ ಲೈಂಗಿಕ ಸಾಮರ್ಥ್ಯವಿಲ್ಲಾ ಎಂದು ಆತನ ಅಡ್ವಕೇಟ್ ಹೇಳುತ್ತಿದ್ದರೂ, ಎಲ್ಲೋ ಒಂದು ಗುಮಾನಿ ನಮ್ಮನ್ನು ಕಾಡದೇ ಇರದು ಈ ಹಿಂದೆ ಆತ ಕಾರ್ಕಳ ಹಾಗೂ ಬೆಂಗಳೂರಿನ ಯುವತಿಯ ಮೇಲೆ ಅತ್ಯಾಚಾರದ ವಿಫಲಯತ್ನದ ಬಗ್ಗೆ ದೂರು, ಹಾಗೂ ಪತ್ರಿಕಾ ವರದಿಗಳು ಸಾಕ್ಷಿ ಒದಗಿಸುತ್ತಿದೆ.ಇದೆಲ್ಲವೂ ಸಾಕ್ಷಿ ನುಡಿಯುತ್ತಿದ್ದರೂ, ಈತನೇ ಅಪರಾಧಿ ಎಂದು ಹೇಳುವಂತಿಲ್ಲ ಕಾರಣ ಸರಿಯಾದ ಜೀವಂತ ಸಾಕ್ಷಿ ಇಲ್ಲವೇ ಇಲ್ಲ.!ಕೋರ್ಟ್ ಪ್ರಾಸಿಕ್ಯೂಷನ್ ನಲ್ಲಿ ವೈಫಲ್ಯೆತೆಯನ್ನು ಕಂಡು ಕೊಂಡಿರಬಹುದೇ ಗೊತ್ತಿಲ್ಲ.ಇನ್ನು ಬಿಡುಗಡೆಗೊಂಡ ಬಳಿಕ ಈ ಸಂತೋಷ್ ರಾವ್ ಯಾರ ಕಣ್ಣಿಗೂ ಕಾಣಿಸಿಲ್ಲ., ಯಾವುದೋ ದೇವಸ್ಥಾನದಲ್ಲಿ ಇದ್ದನೆಂದು, ಆತನಿಗೆ ಮುಖ್ಯ ವಾಹಿನಿಗೆ ಬಂದು ಮಾಧ್ಯಮದ ಮುಂದೆ ನಡೆದ ಘಟನೆಯನ್ನು ವಿವರಿಸಬಹುದಿತ್ತು ಅಲ್ವೇ? ಆತ ಯಾಕೆ ಬರುತ್ತಿಲ್ಲ? ಆತನೇ ಸ್ವತಃ ಹೇಳಿಕೆ ಕೊಟ್ಟರೆ ಅದಕ್ಕೆ ಪೂರಕವಾಗಿ ಮಾಧ್ಯಮದವರು ಪ್ರಶ್ನೆ ಇಟ್ಟರೆ ಎಲ್ಲೊ ಒಂದುಚೂರು ಸತ್ಯ ದರ್ಶನವಾಗಹುದೇನೋ? ಆ ನಾಲ್ವರ ಸುತ್ತಾ ಸೌಜನ್ಯ ಹತ್ಯಾಚಾರ ನಡೆದದ್ದು 2012ರಲ್ಲಿ, ಸೌಜನ್ಯ ಕುಟುಂಸ್ಥರು 2013ರ ಹೊತ್ತಿಗೆ 4 ಜನರು ಇದರಲ್ಲಿ ಬಾಗಿಯಾಗಿದ್ದಾರೆ ಅವರು ಧರ್ಮಸ್ಥಳ ದೇವಸ್ಥಾನಕ್ಕೆ ಸಂಬಂಧ ಪಟ್ಟ ವ್ಯಕ್ತಿಗಳಾದ ನಿಶ್ಚಲ್ ಜೈನ್, ಧೀರಜ್ ಕೆಲ್ಲಾ, ಮಲ್ಲಿಕ್ ಜೈನ್ ಮತ್ತು ಉದಯ್ ಜೈನ್ ಎಂಬ ನಾಲ್ವರು ಎಂದು ಆರೋಪಿಸುತ್ತಾರೆ. ಕೆಲವೊಂದು ಪೂರಕವಾದ ಸಾಕ್ಷಿಗಳನ್ನೂ ಮುಂದೆ ಇಡುತ್ತಾರೆ.ಸೌಜನ್ಯ ಹತ್ಯೆ ಆದ ಆ ದಿನ ಸಂಜೆ ಬೇರೊಂದು ಹುಡುಗಿಯನ್ನು ಅಪಹರಿಸುವ ಸಂಚು ರೂಪಿಸುತ್ತಿದ್ದದ್ದನ್ನು ಮರೆಯಲ್ಲಿ ಸೌಜನ್ಯ ಕುಟುಂಬದ ಸದಸ್ಯರೊಬ್ಬರು ಕೇಳಿ ತಿಳಿದುಕೊಂಡಿದ್ದನ್ನು ಹೇಳುತ್ತಾರೆ. ಆಗ ಆ ಯುವತಿ ಅದೃಷ್ಟವಶಾತ್ ತಪ್ಪಿ ಹೋದ ಕಾರಣ ಅದೇ ಸಮಯಕ್ಕೆ ಸೌಜನ್ಯ ಬಸ್ ಇಳಿದು ಮನೆ ಕಡೆ ಸಾಗುವ ಸಂದರ್ಭ ಆಕೆಯಲ್ಲಿ ಕಿಡ್ನಾಪ್ ಮಾಡಿ ಸನಿಹದ ಲಾಡ್ಜ್ ನಲ್ಲಿ ಈ ನಾಲ್ವರು ಗ್ಯಾಂಗ್ ರೇಪ್ ಮಾಡಿ ಹತ್ಯಮಾಡಿ ಬೆಳಿಗ್ಗೆನ ಜಾವ ತಂದು ಇಲ್ಲಿ ಹಾಕಿದ್ದಾರೆ ,ಆ ದಿನ ರಾತ್ರಿ ನಾವು, ಸಾವಿರಕ್ಕೂ ಅಧಿಕ ಮಂದಿ ಇಲ್ಲಿ ಹುಡುಕಾಟ ನಡೆಸಿದರೂ ಪತ್ತೆಯಾಗದ ಡೆಡ್ ಬಾಡಿ, ಮರುದಿನ ಸಿಕ್ಕಿದ್ದು ನಮಗೆ ಪೂರ್ತಿ ಅನುಮಾನ ಕಾಡಿದೆ ,ಆಕೆಯ ಚಪ್ಪಲಿ ಹಾಗೂ ಕೊಡೆ ಕಾಣೆಯಾಗಿದೆ ,ಆ ದಿನ ರಾತ್ರಿ ಇಡೀ ಮಳೆ ಇತ್ತು ಆದರೂ ಬ್ಯಾಗ್ನಲ್ಲಿದ್ದ ಪುಸ್ತಕಗಳು ಒದ್ದೆಯಾಗಿಲ್ಲ,ಸೌಜನ್ಯಾಳ ನ್ನು ನಾಲ್ವರು ಅಪಹರಿಸುತ್ತಿರುದನ್ನು ನೇರವಾಗಿ ವರ್ಷ ಎನ್ನುವ ವಿದ್ಯಾರ್ಥಿನಿ ಹಾಗೂ ಪರಿಮಳ ಟೀಚರ್ ನೋಡಿದ್ದರ ಬಗ್ಗೆ ಮುಂತಾದ ಹೇಳಿಕೆಗಳನ್ನು ಹೋರಾಟಗಾರರು ಹಾಗೂ ಮನೆಯವರು ನೇರವಾಗಿ ನುಡಿಯುತ್ತಾರೆ.
ಇದರಲ್ಲಿ ಧೀರಜ್ ಕೆಲ್ಲಾ ಮತ್ತು ಮಲ್ಲಿಕ್ ಜೈನ್ ದೇವಸ್ಥಾನದಲ್ಲಿ ಉದ್ಯೋಗಿಯಾಗಿದ್ದರೇ, ಉದಯ್ ಜೈನ್ ಆಟೋ ರಿಕ್ಷಾ ಇಟ್ಟು ಬಾಡಿಗೆ ಮಾಡುವವನು ಇನ್ನು ನಿಶ್ಚಲ್ ಜೈನ್ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ತಮ್ಮನ ಮಗ ಆತ ಅಮೆರಿಕದಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ ಆತ ಈ ಘಟನೆ ನಡೆದ ಸಮಯದಲ್ಲಿ ಊರಿನಲ್ಲಿ ಇರಲೇ ಇಲ್ಲ ಎಂಬ ದಾಖಲೆಯನ್ನು ನೀಡುತ್ತಾರೆ.ಸೌಜನ್ಯ ಮನೆಯವರ ಆರೋಪದಂತೆ ಈ ನಾಲ್ವರ ಬಗ್ಗೆ ನಾವು ಪೊಲೀಸರಿಗೆ ದೂರು ಕೊಟ್ಟರೂ, ಅವರು ಅದನ್ನು ಅಂಗೀಕಾರ ಮಾಡಲಿಲ್ಲ ಎನ್ನುತ್ತಾರೆ. ದೇವಸ್ಥಾನದ ಕೆಲಸದವರು ಹಾಗೂ ತನ್ನ ತಮ್ಮನ ಮಗನಿಗಾಗಿ ವೀರೇಂದ್ರ ಹೆಗ್ಗಡೆಯವರು ಅವರೆನ್ನೆಲ್ಲರನ್ನು ಈ ಪ್ರಕರಣದಲ್ಲಿ ರಕ್ಷಿಸಲು ,ಬಚಾವ್ ಮಾಡಿದ್ದಾರೆ,ಅವರ ಒತ್ತಡಕ್ಕಾಗಿ ಎಲ್ಲವೂ ಮುಚ್ಚಿ ಹೋಗಿದೆ ಮತ್ತು ಅವರ ಪ್ರಭಾವ ಇದರ ಮೇಲೆ ಖಂಡಿತವಾಗಿಯೂ ಬೀರಿದೆ ಎಂಬ ಮಾತನ್ನು ಇಂದಿಗೂ ಹೋರಾಟಗಾರರು ಹೇಳುತ್ತಾ ಬರುತ್ತಿದ್ದಾರೆ.ನಿಶ್ಶಲ್ ಜೈನ್ ಸದ್ಯ ಅಮೆರಿಕದಲ್ಲಿರುವ ಕಾರಣ ಉಳಿದ ಈ ಮೂವರು ಪತ್ರಿಕಾಗೋಷ್ಠಿ ನೆಡಸಿ ತಮ್ಮ ಮೇಲಿನ ಆರೋಪಕ್ಕೆ ತೆರೆ ಏಳುವ ಪ್ರಯತ್ನ ಮಾಡಿದ್ದಾರೆ.ನಮ್ಮ ತನಿಖೆ ಆಗಿದೆ ಸಿಓಡಿ ,ಸಿಬಿಐ ನಮ್ಮನ್ನು ವಿಚಾರಣೆ ಮಾಡಿದ್ದಾರೆ ,ಬ್ರೈನ್ ಮ್ಯಾಪಿಂಗ್ ಅವಶ್ಯತೆ ಇಲ್ಲ ಅಂದ್ರೂ ನಮ್ಮ ಮೇಲೆ ಆರೋಪ ಬಂದಿರುವುದಕ್ಕೆ ಸ್ವತಃ ನಾವಾಗಿಯೇ ಅದಕ್ಕೂ ಒಳಪಟ್ಟಿದ್ದೇವೆ ಎಂದು ಎಲ್ಲಾ ಡೀಟೈಲ್ಸ್ಗಳನ್ನ ಮಾಧ್ಯಮದ ಮುಂದೆ ಇಡುತ್ತಾರೆ. 2016ರಲ್ಲಿ ಶಂಕಿತ ಆರೋಪಿಗಳಾದ ಮಲ್ಲಿಕ್ ಜೈನ್, ಧೀರಜ್ ಜೈನ್ ಮತ್ತು ಉದಯ್ ಜೈನ್ ಅವರಿಗೆ ಸಮನ್ಸ್ ಜಾರಿ ಮಾಡಲಾಗಿತ್ತು ಹಾಗೂ ಮೊನ್ನೆ ಮೊನ್ನೆ ಸೌಜನ್ಯ ತಾಯಿ ಕುಸುಮಾವತಿವರ ಮುಂದೆ ಅಣ್ಣಪ್ಪ ಸ್ವಾಮಿ ದೇವಸ್ಥಾನದಲ್ಲಿ ನಾವು ಯಾವುದೇ ತಪ್ಪು ಮಾಡಿಲ್ಲ ನಮಗೂ ಈ ಕೇಸಿಗೂ ಸಂಭಂದವಿಲ್ಲ ಎಂದು ಪ್ರಮಾಣವನ್ನೂ ಮಾಡಿದ್ದರು.ಒಟ್ಟಾರೆ ಈ ಪ್ರಕರಣದಲ್ಲಿ ಯಾರನ್ನು ನಂಬಬೇಕೋ ಯಾರ ಮೇಲೆ ವಿಶ್ವಾಸ ಇಡಬೇಕೋ ಎಂಬ ಜಿಜ್ಞಾಸೆ ಎಲ್ಲರಲ್ಲೂ ಉಂಟು ಮಾಡಿದೆ! ಉಸಿರುಗಟ್ಟಿಸುತ್ತಿರುವ ಈ ಪ್ರಕರಣಕ್ಕೆ ಒಂದೇ ಪರಿಹಾರ ಮರು ತನಿಖೆ ನಡೆಸುವುದು.! ಅದು ಅಷ್ಟು ಸುಲಭವಲ್ಲ! ಯಾಕೆಂದರೆ ಹನ್ನೊಂದು ವರ್ಷ ಕಳೆದು ಹೋಗಿದೆ ಹೆಚ್ಚಿನ ಸಾಕ್ಷಿಗಳೂ ನಾಶವಾಗಿವೆ. ಉಳಿದಿರುವ ದಾರಿ ಯೊಂದೇ ಅದು ಸಭೀಕರ ಸಮುಖದಲ್ಲಿ ಸಂತೋಷ್ ರಾವ್ ಗೆ ಹಾಗೂ ಆರೋಪ ಬಂದವರನ್ನು ಬ್ರೈನ್ ಮ್ಯಾಪಿಂಗ್ ಗೆ ಒಳಪಡಿಸುವುದು ಇದರಿಂದ ಕಿಂಚಿತ್ ಸತ್ಯ ಹೊರಬೀಳಬಹುದೇನೋ? ನ್ಯಾಯಾಧೀಶರು ಏನು ಹೇಳುತ್ತಾರೆ? ಅತ್ಯಾಚಾರದ ನಂತರ ವೈದ್ಯರು ಸಂಗ್ರಹಿಸಿದ ಮಾದರಿಗಳು ಪ್ರಕರಣಕ್ಕೆ ಪೂರಕವಾಗಿರಲಿಲ್ಲ,ಡಿಎನ್ಎ ವರದಿಯಲ್ಲಿಯೂ ಆರೋಪಿಗಳ ವಿರುದ್ಧ ಯಾವುದೇ ಸಕಾರಾತ್ಮಕ ಸಾಕ್ಷ್ಯಗಳಿಲ್ಲ.ಆರೋಪಿಯ ಬಟ್ಟೆಯ ಮೇಲೆ ಸೆಮಿನಲ್ ಕಲೆಗಳು ಅಥವಾ ಸಂತ್ರಸ್ತೆ ಕೂದಲು ಕಂಡುಬಂದಿಲ್ಲ. ಆಶ್ಚರ್ಯಕರ ಸಂಗತಿಯೆಂದರೆ, ಘಟನೆ ನಡೆದ ಸ್ಥಳದಿಂದ ಏನೂ ಪತ್ತೆಯಾಗಿಲ್ಲ, ಒಂದು ವೇಳೆ ಹೇಳಿದ ಸ್ಥಳದಲ್ಲಿ ಅತ್ಯಾಚಾರ ನಡೆದಿದ್ದರೆ, ಆರೋಪಿಗಳ ಕೂದಲು, ಹೆಜ್ಜೆಗುರುತುಗಳು, ಯಾವುದೇ ಸುಳಿವುಗಳನ್ನು ಕಂಡುಹಿಡಿಯಲು ತಜ್ಞರ ತಂಡವನ್ನು ಕರೆಸಲು ತನಿಖಾಧಿಕಾರಿಗೆ ಏನು ಅಡ್ಡಿಯಾಯಿತು? ನೀರ್ಲಕ್ಷೆ ದೋರಣೆಯನ್ನು ತೋರಿದ್ದರೇ? ಅಥವಾ ಯಾರದ್ದಾದರೂ ಪ್ರಭಾವ ಇದ್ದಿರಬಹುದೇ? ಹೀಗೇಕೆ ಗೊಂದಲ? ಶ್ರೀ ಧರ್ಮಸ್ಥಳ ಕ್ಷೇತ್ರಕ್ಕೆ ಸಂಬಂಧ ಪಟ್ಟವರು, ಅಭಿಮಾನಿಗಳು ಸೌಜನ್ಯ ಪರವಾದ ಹೋರಾಟಗಳಲ್ಲಿ ಅಡ್ಡಿ ಪಡಿಸುವ ಹಾಗೂ ಅದಕ್ಕೆ ವಿರುದ್ಧ ವಾದ ಹೇಳಿಕೆಯನ್ನು ಕೊಡುವ ಮೂಲಕ ಎಲ್ಲೊ ಹೋರಾಟಗಾರರ ದ್ವೇಷಕ್ಕೆ ಹಾಗೂ ಅನುಮಾನಕ್ಕೆ ಕಾರಣೀಭೂತರಾಗುತ್ತಿದ್ದಾರೆ ಎಂದು ಭಾಸವಾಗುತ್ತಿದೆ.ಗೊಂದಲವನ್ನು ಏರ್ಪಡಿಸುತ್ತಿರುವವರ ಹೇಳುವಂತೆ ಕ್ಷೇತ್ರಕ್ಕೆ ಅವಹೇಳನಕಾರಿ, ಅಪಮಾನ ತರುವ ರೀತಿಯಲ್ಲಿ ಪ್ರತಿಭಟನಾಕಾರರು ನೆಡೆದು ಕೊಳ್ಳುತ್ತಿದ್ದಾರೆ ಎಂದು.ಸಂತ್ರಸ್ತೆ ಸೌಜನ್ಯ ಧರ್ಮಸ್ಥಳ ಗ್ರಾಮಕ್ಕೆ ಸೇರಿದವಳು. ಕ್ಷೇತ್ರಕ್ಕೆ ಸಂಬಂಧಿಸಿದವರು ನ್ಯಾಯಪರವಾದ ಹೋರಾಟದಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ಬಾವೋದ್ವೇಗಕ್ಕೆ ಒಳಗಾಗುವ ಹೋರಾಟಗಾರರಲ್ಲಿ ಅಂತಹ ಹೇಳಿಕೆಗಳು ಮಾತಿನ ಬರದಲ್ಲಿ ಹೊರಟಿರುವದು ಸತ್ಯ. ಮೊನ್ನೆ ಉಡುಪಿಯಲ್ಲಿ ನಡೆದ ಸೌಜನ್ಯ ಪರ 'ಜನಾಗ್ರಹ' ಪ್ರತಿಭಟನೆಯಲ್ಲಿ ಒಂದಷ್ಟು ಮಂದಿ ಗೊಂದಲವನ್ನು ಏರ್ಪಡಿಸವ ಕಾರ್ಯಕ್ಕೂ ಕೈ ಹಾಕಿದ್ದರು.೨೦೦೦ ರೂಪಾಯಿ ಕೊಟ್ಟು ಹೋರಾಟ ಕೆಡಿಸಲು ದೇವಸ್ಥಾನಕ್ಕೆ ಸಂಬಂಧ ಪಟ್ಟವರು ನೀಡಿದ್ದಾರೆ ಎಂಬ ವಿಡಿಯೋ ತುಣುಕು ಒಂದು ಕೂಡಾ ಆ ಸಮಯದಲ್ಲಿ ವೈರಲ್ ಕೂಡಾ ಆಗಿತ್ತು.,ಹಾಗೆ ಇತ್ತೀಚಿಗೆ ಬೆಳ್ತಂಗಡಿಯಲ್ಲಿ ನಡೆದ ‘ಧರ್ಮಸ್ಥಳ ಹಕ್ಕೊತ್ತಾಯ' ಸಭೆಯಲ್ಲಿ ಸೌಜನ್ಯಳ ತಾಯಿ ಕುಸುಮಾವತಿ ಹಾಗೂ ಕುಟುಂಬಸ್ಥರಿಗೆ ವೇದಿಕೆ ಏರಲು ಬಿಡದೇ ಅವರ ಮಗನ ಮೇಲೆ ಹಲ್ಲೆಗೆ ಮುಂದಾದ ಘಟನೆಯೂ ನೆಡೆಯಿತು. ಇನ್ನು "ಇದರ ಹಿಂದೆ ಎಷ್ಟು ಜನರ ಕೈವಾಡ ಇದೆ ಎನ್ನುವುದು ನನಗೆ ಗೊತ್ತು ನಾನೇ ಇದನ್ನು ಸಿಬಿಐ ವಹಿಸಲು ಆ ಸಮಯದಲ್ಲಿ ಸರ್ಕಾರದ ಮೇಲೆ ಒತ್ತಡ ಹೇರಿದ್ದೇ ನಾನು, ಸತ್ಯ ವಿಚಾರವನ್ನು ಸೂಕ್ತ ಸಮಯದಲ್ಲಿ ಜನತೆ ಮುಂದೆ ತೆರಿದಿಡಿವೆ "ಎಂದು ಬಹಿರಂಗ ಸಭೆಯಲ್ಲಿ ಹೇಳಿದ್ದರು,ಬೆಳ್ತಂಗಡಿಯ ಮಾಜಿ ಶಾಸಕ ಕಾಂಗ್ರೆಸ್ ನ ವಸಂತ್ ಬಂಗೇರ ! ಇವರ ಹೇಳಿಕೆ ಮತ್ತದೇ ಗೊಂದಲವನ್ನು ಏರ್ಪಡಿಸುವುತ್ತಿದೆ, ಇನ್ನು ಈ ಕೇಸ್ ನಲ್ಲಿ ನೇರ ಸಾಕ್ಷಿದಾರರು ಎಂದು ಗುರುತಿಸಿಕೊಂಡಿರುವ ಪರಿಮಳ ಟೀಚರ್ ಹಾಗೂ ವರ್ಷ ಎಂಬ ವಿದ್ಯಾರ್ಥಿನಿ ಹೀಗೆ ಇವೆಲ್ಲವನ್ನೂ ಕೊಲಂಕುಷವಾಗಿ ಪರಿಗಣಿಸಿ, ಇವರೆಲ್ಲರನ್ನು ಸರಿಯಾಗಿ ತನಿಖೆ ಮಾಡಿ ಒಂದು ವಿಶೇಷ ತನಿಖಾದಳವನ್ನು ನಿಯೋಜಿಸಿದರೇ ಸತ್ಯ ಹೊರಹೊರತರುವುದಕ್ಕೆ ಪ್ರಯಾಸವಾಗದು. ಮಹೇಶ್ ಶೆಟ್ಟಿ ತಿಮರೋಡಿ ಈ ಪ್ರತಿಭಟನೆಗೆ ಧುಮುಕಲು ಕಾರಣವೇನು? ಮಹೇಶ್ ಶೆಟ್ಟಿ ತಿಮ್ಮರೊಡಿ ಬೆಳ್ತಂಗಡಿ ಪರಿಸರದಲ್ಲಿ ಚಿರಪರಿಚಿತ ಹೆಸರು, ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡವರು. ಪ್ರಖರವಾಗ್ಮಿ, ಇದ್ದದ್ದನ್ನು ಇದ್ದ ಹಾಗೆ ಭಯಭೀತಿಯನ್ನುಬದಿಗೊತ್ತಿ ನೇರವಾಗಿ ಕಕ್ಕುವ ವ್ಯಕ್ತಿತ್ವ, ತನ್ನ ಗೌರವಕ್ಕೆ ಚ್ಯುತಿ ಬಂದದ್ದರಿಂದ ಹಿಂದೂ ಸಂಘಟನೆಯಿಂದ ಹೊರಗುಳಿದು ಪ್ರಜಾಪ್ರಭುತ್ವ ವೇದಿಕೆಯನ್ನು ಕಟ್ಟಿದ್ದರು., ಅಲ್ಲಲ್ಲಿ ನ್ಯಾಯ ಪರ ಹೋರಾಟದಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಇವರು, ಅದ್ಹೇಗೋ ಅಚಾನಕ್ಕಾಗಿ ಈ ಪ್ರಕರಣದಲ್ಲಿ ಇಳಿದಿದ್ದರು.,ಸುಖ ಸುಮ್ಮನೆ ನನ್ನ ಮೇಲೆ ಕೇಸು ದಾಖಲು ಗೊಂಡಿದ್ದರಿಂದ ತಾಳ್ಮೆ ಬಿಟ್ಟು ಈ ಹೋರಾಟಕ್ಕೆ ಇಳಿಯಬೇಕಾಯಿತು ಎಂಬ ಮಾತನ್ನು ಸಭೆ ಹೋರಾಟಗಳಲ್ಲಿ ಹೇಳುತ್ತಾ ಬರುತ್ತಿದ್ದಾರೆ.
ಮಹೇಶ್ ಶಟ್ಟಿ ತಿಮ್ಮೋರೋಡಿ ಅವರಿಗೆ ಧರ್ಮಸ್ಥಳ ದೇವಸ್ಥಾನದವರ ಬಗ್ಗೆ ಪೂರ್ವದ್ವೇಷ ಇದ್ದಿರುವುದರಿಂದ ಅದನ್ನು ಸಾಧಿ ಸುವುದಕ್ಕೆ, ತೀರಿಸುವುದಕ್ಕೆ ಈ ಹೋರಾಟವನ್ನು ಅಸ್ತ್ರವಾಗಿ ಬಳಸಿ ಕೊಂಡಿದ್ದಾರೆ., ಈ ಹಿಂದೆ ಅವರಿಗೆ ಎಂ ಎಲ್ ಎ ಸೀಟು ಸಿಗಲಿಲ್ಲ ಪ್ರಯತ್ನಕ್ಕೆ ಫಲ ಸಿಕ್ಕಿರಲಿಲ್ಲ ಮುಂದೆ ಬರುವ ಎಂ ಪಿ ಸೀಟು ಪಡೆಯುವ ಸಲುವಾಗಿ ಈ ರೀತಿ ಹೋರಾಟಕ್ಕೆ ಇಳಿದಿದ್ದಾರೆ, ಒಂದೇ ಕೈಯಲ್ಲಿ ಎರಡು ಹಕ್ಕಿ ಹೊಡೆಯುವ ಪ್ಲಾನ್ ಎಂಬ ಮಾತು ಕೂಡಾ ಜನ ಜನಿತವಾಗಿದೆ. ಸೌಜನ್ಯಾಳಿಗೆ ನ್ಯಾಯ ಸಿಗಲಿ! ಮಹೇಶ್ ಶೆಟ್ಟಿ ತಿಮರೋಡಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನೆಗೆ ಫಲ ಸಿಗಬೇಕಾದರೇ, ಸರ್ಕಾರ ಇದರ ಬಗ್ಗೆ ಗಂಭೀರ ಆಲೋಚನೆ ಮಾಡಿ ಮರು ತನಿಖೆಗೆ ಒಳಪಡಿಸಬೇಕಾಗಿದೆ ಈಗಾಗಲೇ ಸಂತ್ರಸ್ತೆಯ ಕುಟುಂಬಿಕರು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿಯನ್ನೂ ಕೊಟ್ಟಿದ್ದಾರೆ.ಅವರು ಅದನ್ನು ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ತಿಂಗಳು ಕಳೆಯುತ್ತಾ ಬಂದರೂ,ಇದುವರೆಗೂ ಅದರ ಬಗ್ಗೆ ಏನೂ ಪಾಸಿಟಿವ್ ಸೂಚನೆ ಸಿಕ್ಕಿಲ್ಲ,ಇನ್ನು ಬಿಜೆಪಿಯ ಕರಾವಳಿ ಶಾಸಕರು, ಮಾಜಿ ಸಚಿವ ತ್ರಯರು ಸೂಕ್ತ ನ್ಯಾಯ ಲಭಿಸಲು ಸಭೆ ನಡೆಸಿದ್ದಾರೆ ಹಾಗೂ ಮುಖ್ಯ ಮಂತ್ರಿ ಸಿದ್ದರಾಮಯ್ಯರಿಗೆ ಮನವಿಯನ್ನೂ ನೀಡಿದ್ದಾರೆ.ಆದಷ್ಟು ಬೇಗ ಮರು ತನಿಖೆಯಾಗಲಿ,ಹನ್ನೊಂದು ವರ್ಷಗಳಿಂದ ಗೊಂದಲದ ಗೂಡಾಗಿರುವ ಈ ಘಟನೆಗೆ ಪರಿಹಾರ ಲಭಿಸಲಿ,ಸುಖಾಂತ್ಯ ಕಾಣಲಿ.ದಿನ ನಿತ್ಯ ಹೋರಾಟ,ಪ್ರತಿಭಟನೆ ನಡೆಸಿದರೇ ಏನೂ ಪ್ರಯೋಜನ ಕಾಣದು !ಸಂಕ ಮುರಿದಲ್ಲೆ ಸ್ನಾನ ಅನ್ನುವ ರೀತಿಯಲ್ಲಿ ಕೆಲವೊಂದು ಎಡಬಿಡಂಗಿಗಳು ತಮ್ಮ ದ್ವೇಷಕಾರುವುದಕ್ಕೆ,ವಯಕ್ತಿಕ ಚಟುವಟಿಕೆಗಳಿಗೆ ಈ ಪ್ರಕರಣವನ್ನು ದಾಳವಾಗಿ ರೂಪಿಸಿಕೊಂಡು ಕ್ಷೇತ್ರಕ್ಕೆ ಹಾಗೂ ವ್ಯಕ್ತಿಗಳ ಹೆಸರಿಗೆ ಮಸಿಬಳಿಯುವ ಕೆಲಸ ಮುಂದಾಗದೇ ಇರಲಿ.ಕಾಮಾಂಧುರರ ಕಪಿಮುಷ್ಠಿಯಲ್ಲಿ ಸೋತು ಸತ್ತು ಸ್ವರ್ಗ ಸೇರಿದ ಸೌಜನ್ಯ ಬದುಕಿ ಬರಲಾರಳು,ಹಾಗಂತ ಇದನ್ನು ಅಲ್ಲಿಗೆ ಬಿಟ್ಟು ಕೈ ತೊಳೆದು ಕೊಳ್ಳುವ ಸ್ಥಿತಿ ಕೂಡ ನಿರ್ಮಾಣವಾಗ ಬಾರದು, ಅದೆಷ್ಟೋ ಹೆಣ್ಣು ಮಕ್ಕಳು ಕರಾವಳಿಯಲ್ಲಿ ಇದೆ ತೆರನಾಗಿ ಜೀವತೆತ್ತಿದ್ದಾರೆ ಅವರಗಗಳಿಗೆ ನ್ಯಾಯ ಸಿಗದೇ ಕೇಸು ಮುಚ್ಚಿ ಹೋಗಿದ್ದನ್ನು ನೆನಪಿಸಿಕೊಳ್ಳಬಹುದು., ಇದು ಆ ಸಾಲಿಗೆ ಸೇರದೇ ಇರಲಿ., ಇದೊಂದು ಎಲ್ಲರಿಗೂ ಪಾಠ ವಾಗಲಿ ಮುಂದೆ ಇಂಥ ಕ್ರತ್ಯಗಳು ಸಂಭವಿಸದೇ ಇರುವುದಕ್ಕೆ ಈ ಘಟನೆ ನೆನಪು ತರವಂತೆ ಇರಬೇಕು.ಮುಂದೆಂದೂ ಪಾಪಿ ಕಾಮಿಗಳು ಈ ಬಗ್ಗೆ ಆಲೋಚನೆ ಮಾಡಲೇ ಬಾರದು ಅಂತಹ ನಿಸ್ಪಾಕ್ಷ ತನಿಖೆ ಹಾಗೂ ತಪ್ಪಿತಸ್ಥರಿಗೆ ಉಗ್ರ ಕಠಿಣ ಶಿಕ್ಷೆಆಗಲೇ ಬೇಕು.ದಿಲ್ಲಿಗೊಂದು ನ್ಯಾಯ, ಹಳ್ಳಿಗೊಂದು ನ್ಯಾಯ ಆಗಬಾರದು. ಸೌಜನ್ಯಾಳಿಗೆ ನ್ಯಾಯ ಸಿಗಲಿ!

ಶುಕ್ರವಾರ, ಜೂನ್ 23, 2023

ಎಲ್ಲಿಗೆ ಬಂತು ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು?

ಹೌದು ! ಬಿಟ್ಟಿ ಭಾಗ್ಯ ಎಂದೇ ಹೇಳಲಾಗುತ್ತಿದ್ದ ಕಾಂಗ್ರೇಸ್ ನ ಚುನಾವಣಾ ಪ್ರಣಾಳಿಕೆಯಲ್ಲಿದ್ದ ಪ್ರಮುಖ ಐದು ಆಶ್ವಾನೆಗಳ ಗ್ಯಾರಂಟಿ ಭಾಗ್ಯಗಳಲ್ಲಿ ಶಕ್ತಿ ಭಾಗ್ಯ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಒಂದು ಸಧ್ಯಕ್ಕೆ ಜಾರಿಯಾಗಿದ್ದು ಬಿಟ್ಟರೇ ಮತ್ತುಳಿದ ಭಾಗ್ಯಗಳು ನಾಳೆ ,ನಾಳೆ ಎಂಬಂತೆ ಸಾಗುತ್ತಿದೆ.,ಯಾವುದೇ ಮುಂಚಿತ ಪ್ಲಾನ್ ಇಲ್ಲದೇ ,ಎಲೆಕ್ಷೆನ್ ಟೈಮ್ ನಲ್ಲಿ ಗಲ್ಲಿ- ಗಲ್ಲಿಗಳಲ್ಲಿ ಬೀಷಣದ ಭಾಷಣ ಬೀಗುತ್ತಾ ಬಂದ ಕಾಂಗ್ರೆಸ್ ಮುಖಂಡರುಗಳು ಅಂತೂ ಚುನಾವಣೆಯಲ್ಲಿ ಹೆಚ್ಚಿನ ಮತಗಳು ಚಾಲಾವಣೆಗೊಳಿಸಿ ಯಾರೂ ಊಹಿಸಿದ ರೀತಿಯಲ್ಲಿ ಅತ್ಯಧಿಕ ಸೀಟುಗಳನ್ನು ಪಡೆದು ಸರಕಾರ ರೂಪಿಸಿತು.ಕರ್ನಾಟಕದಲ್ಲಿ ನೂತನ ಸರ್ಕಾರ ರೂಪು ಗೊಂಡು ಒಂದೂವರೆ ತಿಂಗಳು ಕಳೆದರೂ,ಗ್ಯಾರಂಟಿ ಯೋಜನೆಯ ಯೋಚನೆ ಸಧ್ಯಕ್ಕೆ ಸಹಕಾರವಾಗುವ ಲಕ್ಷಣ ಕಾಣುತ್ತಿಲ್ಲ ,ನಾಟಕ ದಿನೇ ದಿನೇ ನಾಗಾಲೋಟದಲ್ಲಿ ವಿಹರಿಸುತ್ತಿದೆ.ಸರ್ಕಾರ ಬಂದ ಮೊದಲನೇ ದಿನವೇ ನಾವು ಎಲ್ಲಾ ಗ್ಯಾರಂಟಿಗಳನ್ನೂ ಜಾರಿಗೊಳಿಸುತ್ತೇವೆ ಎಂದು ಹೇಳುತ್ತಿದ್ದ ಕೈ ಪಕ್ಷ ಜಾರಿಗೆ ತರುವಲ್ಲಿ ಶತಾಯಗತಾಯ ಶ್ರಮಿಸುತ್ತಿದೆ. ಬೇರೆ ವಿಧಿ ಇಲ್ಲ ಲೋಕಸಭಾ ಚುನಾವಣಾ ಸನಿಹದಲ್ಲಿದೆ ಇತ್ತ ಪ್ರತಿಪಕ್ಷಗಳ ದಾಳಿ,ಜನರ ಪ್ರತಿಭಟನೆಗೆ ಬೆದರಿ ಏನೋ ಒಂದು ರೂಪುರೇಷೆ ರೂಪಿಸಲೇ ಬೇಕಾಗಿದೆ. ಇಷ್ಟೆಲ್ಲಾ ಬಿಟ್ಟಿ ಭಾಗ್ಯ ದಯಪಾಲಿಸಲು ಖಂಡಿತವಾಗಿಯೂ ಆರ್ಥಿಕ ಪರಿಸ್ಥಿತಿ ನೆಟ್ಟಗಿರಲೇ ಬೇಕು . ಈ ಸಂಬಂಧ ಆರ್ಥಿಕ ತಜ್ಞರು ಕಾಂಗ್ರೆಸ್ ಗ್ಯಾರಂಟಿ ಕಾರ್ಡುಗಳ ಬಗ್ಗೆ ಎಷ್ಟೇ ಅಭಿಪ್ರಾಯ ಪಟ್ಟರೂ, ಯಾವುದಕ್ಕೂ ತಲೆ ಕೆಡಿಸಿ ಕೊಳ್ಳದ ಕಾಂಗ್ರೆಸ್ ಗೆದ್ದ ಮೇಲೆ ನೋಡಿದರಾಯ್ತು ಎಂಬಂತೆ ವರ್ತಿಸಿದವು, ಮೈಕ್ ಹಿಡಿದು ಘರ್ಜಿಸಿದ್ದೇ ಘರ್ಜರಿಸಿದ್ದು !
ಗೆದ್ದ ಮೇಲೆ ಕೊಡಲೇ ಬೇಕಾದ ಅನಿವಾರ್ಯತೆ ,ಪ್ರತಿಪಕ್ಷಗಳ ಹಾರಾಟ ,ಜನತೆಯ ಹೋರಾಟ ಇದಕ್ಕೆಲ್ಲಾ ಸಮಾಧಾನ ದಿಂದ ಪರಿಹರಿಸಲು ಕಂಡು ಕೊಂಡ ಮಾರ್ಗಗಲು ವಿಚಿತ್ರವೆನ್ನಿಸುತ್ತಿದೆ ಕೊಡುವುದು ಹೇಗೆ ?: ಹೌದು ! ಕೊಡದೇ ಇದ್ದರೇ ಜನ ದಂಗೆಗೆ ಏಳುವುದು ಖಚಿತ.ಇದಕ್ಕಾಗಿ ಹೊಸ ಪ್ಲಾನ್ ! ಗ್ಯಾರಂಟಿ ಕಾರ್ಡ್ ಹಿಡಿದು ಪ್ರಚಾರ ಮಾಡುವಾಗ ಇಲ್ಲದಿದ್ದ ಷರತ್ತುಗಳು ಈಗ ಒಮ್ಮೆಲೇ ಜೀವ ಪಡೆದುಕೊಳ್ಳುತ್ತಿದೆ ಎಲ್ಲದಕ್ಕೂ ಕಂಡೀಷನ್ ಅಪ್ಲೇ ! ಅದೂ ದಿನ-ದಿನವೂ ಬದಲಾವಣೆ ಒಬೊಬ್ಬ ಮುಖಂಡರದ್ದು ಒಂದೊಂದು ಷರತ್ತುಗಳ ನಿಯಮ,ಅಂತೂ ಇಂತೂ ಮೊನ್ನೆ ಮೊನ್ನೆ ಹೆಗಲ್ಲಾ, ಎಷ್ಟೆಲ್ಲಾ ಕಷ್ಟ ಪಟ್ಟು ಶಕ್ತಿ ಯೋಜನೆ ಯನ್ನು ಜಾರಿಗೆ ತಂದೆ ಬಿಟ್ಟಿತು ಸಿದ್ದರಾಮಯ್ಯನ ಸರ್ಕಾರ. ಮಹಿಳೆಯರಿಗೆ ಸರ್ಕಾರಿ ಸಾಮನ್ಯ ಬಸ್ ಗಳಲ್ಲಿ ಉಚಿತ ಪ್ರಯಾಣ ರಾಜ್ಯದೊಳಗೆ ರಾಜ್ಯದವರಿಗೆ ಮಾತ್ರ .ಅಬ್ಬಬ್ಬಾ ! ಬಸ್ಸು ಕಡಿಮೆ, ಪ್ರಯಾಣಿಕರು ಸಂಖ್ಯೆ ಅಧಿಕ ,ಬಸ್ಸು ರಶೋ ರಷ್ಹು ! ಜಗಳ, ಗಲಾಟೆ ,ಬಸ್ಸಿನ ಬಾಗಿಲು ಕಿತ್ತು ಬರುವುದು,ಬಸ್ಸಿನ ಕಿಟಕಿಗಳ ಮೂಲಕವೂ ಏರುವುದು ಒಂದೇ ಎರಡೇ ಇಷ್ಟಕ್ಕೆ ನಿಲ್ಲುತ್ತಿಲ್ಲ ಇದು ಕಂಟಿನ್ಯೂ ಆಗ್ತಾನೆ ಇದೆ ,ಎಷ್ಟೇ ಆಘಾತ ,ಅಪಘಾತವಾದರೂ,ಸರ್ಕಾರದ ಬೊಕ್ಕಸಕ್ಕೆ ಲಾಸ್ ಆದರೂ ಚಿಂತೆ ಇಲ್ಲ ಒಟ್ಟಾರೆ ಒಂದು ಗ್ಯಾರಂಟಿ ಜಾರಿ ಗೊಂಡು ಸಧ್ಯ ನಡಿತಾ ಇದೆ. ಎರಡನೇ ಗ್ಯಾರಂಟಿ ಗ್ರಹಲಕ್ಷ್ಮಿ ಉಚಿತ ೨೦೦ ಯೂನಿಟ್ ವಿದ್ಯುತ್ ಫ್ರೀ ಎಂಬ ಯೋಜನೆ ಇದಾಗಿತ್ತು . ಕಲ್ಲುಬಿದ್ದಿದೆ ಇದಕ್ಕೂ ಅಷ್ಟೇ ಸಾಕಷ್ಟು ಕಂಡೀಷನ್ !ಚುನಾವಣೆಗೆ ಮೊದಲು ನಂಗೂ ಫ್ರೀ ,ನಿಂಗೂ ಫ್ರೀ ಎನ್ನುತಿದ್ದ ಮಾತಿಗಿಲ್ಲದ ಷರತ್ತು ಈಗ ಬಂತು ಯಾರು ಎಷ್ಟು ಎಲೆಕ್ಟ್ರಿಸಿಟಿ ಖರ್ಚು ಮಾಡುತ್ತಾರೋ ಒಂದು ವರ್ಷದ ಅವರೇಜ್ ನ್ನು ಲೆಕ್ಕ ಹಾಕಿ ೧೦% ಅಷ್ಟು ಹೆಚ್ಚಿಗೆ ಸಬ್ಸಿಡಿ ಕೊಟ್ಟು ಅವರಿಗೆ ಉಚಿತವಾಗಿ ನೀಡುವುದು ಎಂಬ ನಿಯಮ.ಅಂದರೆ ಒಂದು ಮನೆಯಲ್ಲಿ ತಿಂಗಳಿಗೆ ೫೦ ಯೂನಿಟ್ ವ್ಯಯಿಸಿದ್ದರೇ ಅದನ್ನೇ ಸರಾಸರಿಯಲ್ಲಿಎಕ್ಕ ಹಾಕಿ ೬೦ ಯುನಿಟ್ ವರೆಗೆ ಮಾತ್ರ ಸರ್ಕಾರ ಭರಿಸುವುದು ಅದಕ್ಕಿಂತ ಒಂದು ಯೂನಿಟ್ ಹೆಚ್ಚಿಗೆ ಬಂದರೂ ಅದಕ್ಕೆ ಮನೆಯವರೇ ಜವಾಬ್ದಾರರು., ಸರ್ಕಾರ ಹೊಣೆ ಅಲ್ಲ. ೨೦೦ ಯೂನಿಟ್ ಫ್ರೀ, ಫ್ರೀ ಎನ್ನುತ್ತಿದ್ದ ಅತಿರಥರದ್ದು ಈಗಿನ ಷರತ್ತು. ಜುನ್ ತಿಂಗಳಿಂದ ಬಿಲ್ ಕಟ್ಟಬೇಕಾಗಿಲ್ಲ ಎನ್ನುತ್ತಿದ್ದವರು ಈಗ ಒಂದು ತಿಂಗಳು ಮುಂದಕ್ಕೆ ದೂಡಿ ಜುಲೈ ಆಗಿದೆ ,ಸಧ್ಯಕ್ಕೆ ಅದೂ ಕೂಡ ಫೈನಲ್ ಆಗಿಲ್ಲ ,ಅದಕ್ಕೂ ಸಹಾ ಅರ್ಜಿ ಗುಜರಾಯಿಸಲು ಒದ್ದಾಡ ಬೇಕಿದೆ ಓಡಾಡ ಬೇಕಿದೆ , ಸೇವಾ ಸಿಂಧೂ ಆನ್ಲೈನ್ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಲು ಜೂನ್೧೮ ರಿಂದ ಜಾರಿಗೆ ಬಂದರೂ ,ಪೋರ್ಟಲ್ ಮಾತ್ರ ಫುಲ್ ಸರ್ವರ್ ಡೌನ್ ! ಜನ ದಿನ ನಿತ್ಯ ತಮ್ಮ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಕಾದು -ಕಾದು ಸುಸ್ತಾಗಿ ಮನೆಕಡೆ ಹೆಜ್ಜೆ ಹಾಕದೇ ವಿಧಿ ಇಲ್ಲ. ಆಫ್ ಲೈನ್ ಮೂಲಕ ಅಥವಾ ಸರಳವಾಗಿ ,ಪಂಚಾಯತ್ ,ಬೂತ್ ಮಟ್ಟದಲ್ಲಿ ಇದನ್ನು ಕೈ ಕೊಂಡಿದ್ದರೆ ,ಹೇಗೂ ಕೈ ಪಕ್ಷ ಮಾಡಿದ ತಲೆ ಬುಡ ಇಲ್ಲದ ಗ್ಯಾರಂಟಿ ಯೋಜನೆಗೆ ಗೌರವ ವಾದರೂ ಸಿಗುತ್ತಿತ್ತು , ಇನ್ನು ಸೈಬರ್ ಕೆಫೆ ಗಳಲ್ಲಿ ೧೦೦,೨೦೦ ರೂಪಾಯಿಗಳನ್ನು ನೀಡಬೇಕಾದ ಪರಿಸ್ಥಿತಿ ಅದೂ ಕೂಡಾ ದಿನವೀಡೀ ಕಾದೂ ಬಸವಳಿದು ! ಇನ್ನು ಅನ್ನ ಭಾಗ್ಯದ ಸರದಿ ,ಹತ್ತು ಕೆಜಿ ಅಕ್ಕಿ ಕೊಡುತ್ತೇವೆ ಎನ್ನುತ್ತಿದ್ದವರು ,ಈಗ ಅಕ್ಕಿ ಸ್ಟಾಕ್ ಇಲ್ಲದೇ ಅಕ್ಕಿಗಾಗಿ ಜಟಾಪಟಿ ನಡೆಸುತ್ತಿದ್ದಾರೆ . ಐದು ಕೆಜಿ ಅಂತೂ ಕೇಂದ್ರ ಸರ್ಕಾರ ನೀಡುತ್ತಿದೆ ಇನ್ನೈದು ಕೆಜಿ ಸಿದ್ದರಾಮಯ್ಯ ಸರ್ಕಾರದ್ದೂ.ಇದನ್ನು ಹೊಂದಿಸಿಕೊಂಡು ಹಂಚಿಕೆ ಮಾಡಿ ತಮ್ಮ ಜವಾಬ್ದಾರಿಯನ್ನು ಮರೆಯಬೇಕಿದ್ದ ,ಸಿದ್ದರಾಮಯ್ಯ ಅಂಡ್ ಗ್ಯಾಂಗ್ ಇಲ್ಲ ಸಲ್ಲದ ಆರೋಪವನ್ನು ಮಾಡುತ್ತಿದೆ. ನುಡಿದಂತೆ ನಡೆಯಲು ಆಗದವರು ಕೇಂದ್ರ ಸರ್ಕಾರದ ಕಡೆ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ .ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತಿಲ್ಲ ಅವರ ಬಳಿ ತುಂಬಾ ಸ್ಟಾಕ್ ಇದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಹೋರಾಟವನ್ನೂ ಮಾಡಿ ಬಿಟ್ಟದ್ದಾರೆ . ಕೇಂದ್ರ ಸರ್ಕಾರ ನೀಡುವ ಐದು ಕೆಜಿಯನ್ನು ಅವರು ಕೊಡುತ್ತಿದ್ದಾರೆ ,ಹೆಚ್ಚುವರಿಯಾಗಿ ಐದು ಕೆಜಿ ಕೊಡಲು ಬಿಜೆಪಿ ಪ್ರಣಾಳಿಕೆಯಲ್ಲಿತ್ತೆ ?ಕಾಂಗ್ರೆಸ್ ಅಲ್ಲವೇ ೧೦ ಕೆಜಿ ನೀಡುತ್ತೇವೆ ಎಂದು ಡಂಗುರ ಸಾರಿದ್ದು, ಹತ್ತು ಕೆಜಿ ಎಂದು ಗ್ಯಾರಂಟಿ ಕಾರ್ಡ್ ನಲ್ಲಿ ಹೇಳಿದ್ದರು ಐದು ಕೆಜಿ ಕೇಂದ್ರ ಸರ್ಕಾರ ಕೊಡುತ್ತಿದೆ ಅದನ್ನು ಬಿಟ್ಟು ಕಾಂಗ್ರೆಸ್ ೧೦ ಕೆಜಿ ಕೊಡುತ್ತದೆಯೋ ಉತ್ತರವಿಲ್ಲ ಅದು ಸೇರಿದರೇ ಒಟ್ಟು ೧೫ ಕೆಜಿ ಪಡಿತರ ಆಗುತ್ತದೆ. ಅಕ್ಕಿ ಕೊಡಿ ನಾವು ಪ್ರತಿಯಾಗಿ ಹಣ ನೀಡುತ್ತೇವೆ ನಮಗೆ ಪುಕ್ಕಟೆ ಬೇಡ ಎನ್ನುವ ಕೇಂದ್ರ ಸರಕಾರಕ್ಕೆ ಇವರುಗಳು ಬೇರೆ ಎಲ್ಲಿಯಾದರೂ ಆರೆಂಜ್ ಮಾಡಿ ಕೊಳ್ಳಬಾರದೇಕೇ ?ನಮ್ಮ ರಾಜ್ಯದಲ್ಲಿ ಅದೆಷ್ಟೋ ರೈತರಿದ್ದಾರೆ ಅವರಿಂದ ಪಡೆದು ಕೊಳ್ಳಲಿ ಅವರಿಗೂ ಸಹಾ ಅದರಿಂದ ಸಹಾಯವಾಗಬಲ್ಲದು ,ಅದಿಲ್ಲದಿದ್ದರೇ ಬೇರೆ ರಾಜ್ಯಗಳಿಂದ ಆಮದು ಮಾಡಿಕೊಳ್ಳಲಿ , ಅದ್ಯಾವುದೂ ಆಗದೇ ಹೋದಲ್ಲಿ ಆ ಐದು ಕೆಜಿಯ ಹಣವನ್ನು ಫಲಾನುಭಿಗಳ ಖಾತೆಗೆ ಹಾಕಲಿ ,ಒಟ್ಟಾರೆ ಕುಂಟು ನೆಪ ಹೇಳಿ ಜಾರಿ ಕೊಳ್ಳುವ ಉಪಾಯ ಬೇಡ. ದಿನ, ತಿಂಗಳುಗಳು ಹೀಗೆ ಸಾಗಲಿ ಎಂಬ ವಿಚಾರ ಇರಬಹುದೇ ,ಜುಲೈ ನಿಂದ ಕೊಡುತ್ತೇವೆ ಅಂದವರು ಈದೀಗ ಆಹಾರ ಸಚಿವರ ವರಸೆ ಬದಲಾಗಿದೆ ಆಗಷ್ಟ್ ಗೆ ಎಂಬ ಉತ್ತರ ಬರುತ್ತಿದೆ.,ಗೊತ್ತಿಲ್ಲ ಮುಂದಿನ ಕಥೆ ಏನೋ ? ಕೇಂದ್ರ ಸರ್ಕಾರ ನೀಡುತ್ತದೆ ಎಂದು ಎಲ್ಲಿಯೂ ಹೇಳಿಲ್ಲ ಕೇಂದ್ರದ ಬಳಿ ಒಂದಿಷ್ಟು ಸ್ಟಾಕ್ ಇದ್ದರೂ ಸುಮಾರು ೩೦ ರಾಜ್ಯಗಳ ಹೊಣೆ ಕೇಂದ್ರ ಸರ್ಕಾರದ ಮೇಲೆ ಇದೆ,ಪ್ರತಿ ರಾಜ್ಯಕ್ಕೂ ತಲಾ ಐದು ಕೆಜಿ ಯಂತೆ ನೀಡಬೇಕು ,ಮುಂಗಾರು ಹಿನ್ನಡೆ ಮತ್ತಿತರ ಕಾರಣಗಳಿಂದ ಭವಿಷ್ಯದ ವಿಚಾರಕ್ಕೆ ಸ್ಟಾಕ್ ಮಾಡಿ ಕೊಂಡಿರಬಹದು ಅದನ್ನು ತಮಗೆ ನೀಡಿ ಎಂದು ಬೆನ್ನು ಬೀಳುವುದು ,ಹೋರಾಟ ನೆಡೆಸುವುದು ಎಷ್ಟು ಸರಿ? ಗ್ರಹ ಲಕ್ಷ್ಮೀ ಗ್ಯಾರಂಟಿಗೂ ಷರತ್ತು ಅನ್ವಯವಾಗಿದೆ ರಾಜ್ಯದ ಎಲ್ಲಾ ಮನೆ ಯಜಮಾನಿಯೂ ಫಲಾನುಭವಿ ಅಲ್ಲ ಬಿಪಿಎಲ್ ಕಾರ್ಡ್ ಹೊಂದಿರುವ ಅದರಲ್ಲೂ ಮನೆಯಲ್ಲಿ ಯಾರಾದರೂ ಟ್ಯಾಕ್ಸ್ ಪೇಯರ್ ಆಗಿದ್ದರೆ ಅವರಿಗೆ ಇಲ್ಲವೇ ಇಲ್ಲ. ಇನ್ನೂ ಜಾರಿ ಗೊಂಡಿಲ್ಲ ,ಅದಿನ್ನೂ ಇಮ್ಲಿಮೆಂಟ್ ನಲ್ಲೇ ಇದೆ., ಎಂದು ಅರ್ಜಿಗೆ ಅವಕಾಶ ಪಡೆದು ಕೊಳ್ಳುತ್ತೋ ಕಾದುನೋಡಬೇಕಾಗಿದೆ . ಒಟ್ಟಾರೆ ನಾಲ್ಕು ಗ್ಯಾರಂಟಿಗಳ ಬಗೆಗೆ ದಿನ ನಿತ್ಯ ಒಂದೊಂದು ಷರತ್ತು ನಿಯಮಾವಳಿ ಕೇಳಿ ಬರುತ್ತಿದ್ದರೇ, ಐದನೇ ಗ್ಯಾರಂಟಿ ಯುವ ನಿಧಿ ಪದವಿದರರಿಗೆ ೩೦೦೦ ಹಾಗೂ ಡಿಪ್ಲೋಮ ಹೊಂದಿದವರಿಗೆ ೧೫೦೦ರೂ. ಪದವಿ ಮತ್ತು ಡಿಪ್ಲೋಮಾ ಮುಗಿಸಿರುವ ನಿರುದ್ಯೋಗಿ ಯುವಕರಿಗೆ ಪ್ರತಿ ತಿಂಗಳು ನಿರುದ್ಯೋಗ ಭತ್ಯೆ ನೀಡುವ ಯುವ ನಿಧಿ ಯೋಜನೆಯ ಪ್ರಕಾರ, 2022-23ನೇ ಶೈಕ್ಷಣಿಕ ವರ್ಷದಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳಿಗೆ ಮಾತ್ರ ನಿರುದ್ಯೋಗ ಭತ್ಯೆಯನ್ನು, ಅದೂ ಎರಡು ವರ್ಷಗಳ ಅವಧಿಗೆ ಮಾತ್ರ ನೀಡಲಾಗುವುದು ಎಂಬ ಷರತ್ತು ವಿಧಿಸಲಾಗಿದೆ. ಹಾಗಾದರೆ ಈ ಅವಧಿಗೆ ಮುನ್ನ ಪದವಿ, ಡಿಪ್ಲೋಮಾ, ಇನ್ನಿತರ ವೃತ್ತಿಪರ ಕೋರ್ಸ್ಗಳನ್ನು ಮುಗಿಸಿ ಉದ್ಯೋಗಕ್ಕಾಗಿ ಹಗಲಿರಳು ಶ್ರಮಿಸುತ್ತ, ಜಾತಕ ಪಕ್ಷಿಗಳಂತೆ ಕಾಯುತ್ತಿರುವ ಯುವಜನರು ನಿರುದ್ಯೋಗಿಗಳಲ್ಲವೇ..? ಸದ್ಯಕ್ಕೆ ಈ ಯೋಜನೆಯ ಆಸೆ ಬದಿಗಿರಿಸೋಣ! ಇನ್ನೊಂದು ವರ್ಷದೊಳಗೆ ಎಂಪಿ ಎಲೆಕ್ಷನ್ ಬರುತ್ತಿದೆ ಅದರ ಒಳಗೆ ಈ ಐದು ಗ್ಯಾರಂಟಿಗಳು ಫಲಪ್ರಧವಾದರೇ ಕಾಂಗ್ರೆಸ್ ಗೆ ಒಂದೆರಡು ಹೆಚ್ಚಿಗೆ ಓಟ್ ಬೀಳಬಹುದು . ಎಲ್ಲಿಂದ ಬರಲಿದೆ ಗ್ಯಾರಂಟಿ ಯೋಜನೆಗೆ ಬಜೆಟ್ ? ನುಡಿದಂತೆ ನಡೆದಿದ್ದೇವೆ ಎಂದು ಬೀಗುವ ಕಾಂಗ್ರೆಸ್ ,ಹೇಳಿದ್ದು ಬೇರೆ ಮಾಡುತ್ತಿರುವುದೇ ಬೇರೆ ,ಎಲ್ಲಾ ಗ್ಯಾರಂಟಿ ಗಳಿಗೆ ಕಂಡೀಷನ್ ಆಪ್ಲ್ಯೆ ! ,ಇಷ್ಟಾದರೂ ಇದಕ್ಕೆ ಸಾವಿರಾರು ಕೋಟಿ ಬಜೆಟ್ ಬೇಕೇ ಬೇಕು ! ಎಲ್ಲಿಂದ ಬರುತ್ತದೆ ಬಜೆಟ್ ? ಒಂದೋ ಸಾಲ ಮಾಡಬೇಕು ಇಲ್ಲ ಬೆಲೆ ಏರಿಕೆ ಮಾಡಲೇಬೇಕು ಇದಲ್ಲದೆ ಬೇರೆ ವಿಧಿ ,ಯಾವೋಬ್ಬ ಜನ ಪ್ರತಿನಿಧಿಯೂ ತಮ್ಮ ಮನೆಯಿಂದ ಬಂಡವಾಳ ಹಾಕುವುದಿಲ್ಲ ಎಲ್ಲವೂ ನಮ್ಮ ಸಾಮಾನ್ಯ ಪ್ರತಿಯೊಬ್ಬ ನಾಗರಿಕನ ಬೆವರಿನ ಹಣವೇ . , ಅಗತ್ಯ ವಸ್ತುಗಳ ಬೆಲೆ ಏರಿಕೆ ಕಂಡಿದೆ ,ವಿದ್ಯುತ್ತು ಬೆಲೆ ಸಾರ್ವಕಾಲಿಕ ದಾಖಲೆ ಕಂಡಿದೆ ,ಅಬಕಾರಿ ವಸ್ತುಗಳ ಬೆಲೆ ೨೦% ಕೂ ಅಧಿಕ ಏರಿಕೆ ,ಹಾಲಿನ ದರ ಲೀ ೫ ರೂ ಏರಿಕೆ ಕಾಣಲಿದೆಯಂತೆ , ಪೆಟ್ರೋಲ್ ,ಡೀಸೆಲ್ ಬೆಲೆ ಕೆಲವೇ ದಿನಗಳಲ್ಲಿ ಏರಿಕೆ ಕಾಣಲಿದೆ ಎಂಬ ಮಾತು ಕೇಳಿಬರುತ್ತಿದೆ. ಹೆಚ್ಚಿನ ವಸ್ತುಗಳೆಲ್ಲವೂ ದುಪ್ಪಟ್ಟು ,ಇದೇ ಉಚಿತ ಭಾಗ್ಯಕ್ಕೆ ಹೆಲ್ಪ್ .ಅಂತೂ ಎಲ್ಲರ ನಿರೀಕ್ಷೆಯಂತೆ ೧೦ರೂ ಕೊಟ್ಟು ೨೦ರೂ ವಸೂಲಿ ಮಾಡುವ ತಂತ್ರಗಾರಿಕೆ ಎನ್ನುವುದು ಗಾತ್ರಿ ಆಗಿದೆ. ಜೊತೆಗೆ ಇದೆ ಸಾಲದ ಶೂಲ ,ಒಟ್ಟಾರೆ ದಿವಾಳಿ ಭಾಗ್ಯ . ಏನೆ ಇರಲಿ ಇದೀಗ ಮುಖ್ಯ ಐದು ಗ್ಯಾರಂಟಿಗಳ ವಿಚಾರಗಳಷ್ಟೇ ಪ್ರಚಾರಕ್ಕೆ ಬಂದಿರುವಂತದ್ದು ,ಮುಂದೆ ಪ್ರಣಾಳಿಕೆಯಲ್ಲಿ ಭರ್ತಿ ಭರವಸೆಗಳ ಪೂರ ,ಭಾಗ್ಯಗಳ ಲಿಸ್ಟ್ ಇದೆ ಅದು ಎಂದು ಮುನ್ನೆಲೆಗೆ ಬರುತ್ತೋ ಗೊತ್ತಿಲ್ಲ. ಮುಂದಿನ ಚುನಾವಣೆಯನ್ನು ದ್ರಷ್ಟಿಯಲ್ಲಿ ಇಟ್ಟುಕೊಂಡು ಹೇಗಾದ್ರೂ ಷರತ್ತು ನಿಯಮಗಳನ್ನು ಸೇರಿಸಿ ,ಬೆರೆಯಿಸಿ ಚಲಾಯಿಸಬಹುದು ,ಐದು ವರ್ಷ ಈ ಗ್ಯಾರಂಟಿಗಳ ಜೊತೆ ಪ್ರಣಾಳಿಕೆಯನ್ನ ಆಶ್ವಾಸನೆಗಾಲ ಮಹಾಪೂರ ಜಾರಿ ಯಾವುದು ಕಷ್ಟ ಸಾಧ್ಯ ,ಅದು ಜಾರಿಯಾದರೇ ರಾಜ್ಯ ಇನ್ನೊಂದು ಶ್ರೀಲಂಕಾ ಆಗುವದು ಶತ ಸಿದ್ದ , ಎಂಪಿ ಚುನಾವಣೆಯಲ್ಲಿ ,ಮತದಾರರು ಸರಿಯಾದ ಪಾಠ ಕಲಿಸುತ್ತಾರೆ ಎಂಬ ವಿಶ್ವಾಸ ಎಲ್ಲರಲ್ಲೂ ಇದೆ ,ಯಾವುದಕ್ಕೂ ಮೊದಲು ಪ್ರತಿಪಕ್ಷಗಳು ಸ್ಟ್ರಾಂಗ್ ಆಗಬೇಕಿದೆ ,ಕೇವಲ ಒಂದೆರಡು ಮುಖಗಳು ಮುನ್ನೆಲೆಗೆ ಬಂದು ಮಾಧ್ಯಮದ ಮುಂದೆ ಅರಚಿದರೇ ಪ್ರಯೋಜನವಾಗದು ಗಟ್ಟಿ ಧ್ವನಿ ಮೊಳಗಿಸುವ ಗುಂಡಿಗೆ ಇರಬೇಕು ,ಬರಬೇಕು ,ರಾಜ್ಯ ಅಭಿವೃದ್ಧಿ ಗೊಳ್ಳಬೇಕು ,ಬಿಟ್ಟಿ ಭಾಗ್ಯಗಳನ್ನ ಕೊಟ್ಟು ಜನರನ್ನು ಸೋಮಾರಿಯನ್ನಾಗಿಸುವ ಚಾಳಿ ದೂರವಾಗ್ಬೇಕು ,ಉಚಿತ ಕೊಡಲೇಬೇಕು ಎನ್ನುವ ಮನಸ್ಥಿತಿ ಇದ್ದರೇ ಮೂಲಭೂತ ವಿಚಾರಕ್ಕೆ ನೀಡಲಿ ,ಆರೋಗ್ಯ,ಶಿಕ್ಷಣ ,ಇನ್ನಿತರಕ್ಕೆ ವಿನಿಯೋಗವಾಗಲಿ ಎಂಬ ಸದಾಶಯದೊಂದಿಗೆ .