ಶನಿವಾರ, ಜೂನ್ 21, 2025

ಆನೆ ಬಂತೊಂದು ಆನೆ ..!!

ಸಿದ್ದಾಪುರ ವಾರದ ಸಂತೆ ಬಂದ್ ! ಶಾಲಾ ಕಾಲೇಜುಗಳಿಗೆ 3 ದಿನ ರಜೆ ! ಯಾರೂ ಮನೆಯಿಂದ ಹೊರಗೆ ಬರಬೇಡಿ ,ವಾಹನ ಸವಾರರೇ ಎಚ್ಚರ ವಹಿಸಿ,ಆನೆ ಕಂಡ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ, ಭಯಬೇಡ ಎನ್ನುವ ಅನ್ವಾಂಸ್ಮೆಂಟ್..!! ಎಲ್ಲರಲ್ಲೂ ಆತಂಕ, ಕುತೂಹಲ ಊರಿಗೆ ಊರೇ ಭಯದ ವಾತಾವರಣದಲ್ಲಿತ್ತು. ಅಂತೂ ಮೂರು ದಿನಗಳ ಬಳಿಕ ಎಲ್ಲವೂ ಸಹಜ ಸ್ಥಿತಿ! ಸ್ಥಳೀಯರಲ್ಲಿ ಬೇಸರ, ಸಪ್ಪೆ ಮೊರೆ ! ಇದು ಕಾಡಿನ ಆನೆ ನಾಡಿಗೆ ಬಂದ ಕಥೆ ಹಾಸನ ಜಿಲ್ಲೆಯ ದಟ್ಟ ಅರಣ್ಯವೊಂದರಲ್ಲಿ ಕಾಡಾನೆಯನ್ನು ಅರಣ್ಯ ಇಲಾಖೆ ಸೆರೆ ಹಿಡಿದಿದ್ದರು. ಅದಕ್ಕೆ ಜಿಪಿಎಸ್ ನ್ನು ಅಳವಡಿಸಿ, 'ಹಡ್ಕ ಬಡ್ಕ' ಎಂಬ ನಾಮಧೆಯವನ್ನು ಮಾಡಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೀಸಲು ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದರು. ಅದೇನೋ ಗೊತ್ತಿಲ್ಲ ಒಂದೆರಡು ದಿನ ಅಷ್ಟೇ ತನ್ನ ಕಾಡು, ಬಂಧು-ಬಳಗದವರ ನೆನಪು ಆಯಿತೋ ಏನೋ ಹಡ್ಕ ಬಡ್ಕ ಅಲ್ಲಿಂದ ತಪ್ಪಿಸಿಕೊಂಡು ಬಿಟ್ಟ.ತನ್ನ ಕಾಡನ್ನು ಅರಸುತ್ತಾ,ಅರಸುತ್ತಾ ಬಾಳೆಬರೆ ಘಾಟಿ ಇಳಿದ.ಘಾಟಿ ಇಳಿಯುತ್ತಿದ್ದ ಸಂದರ್ಭ ಒಂದಶ್ಟು ವಾಹನ ಸವಾರರು ಅದನ್ನು ನೋಡಿದ್ದರು. ವೀಡಿಯೋ ಫೋಟೋ ತೆಗೆದು ಸಾಮಾಜಿಕ ಜಾಲ ತಾಣಗಳಲ್ಲಿ ಹರಿಯಬಿಟ್ಟದ್ದರು. ಯಾರಿಗೂ ತೊಂದರೆ ಮಾಡದೇ ತನ್ನ ಪಾಡಿಗೆ ರಾಜ್ಯ ಹೆದ್ದಾರಿಯಲ್ಲೇ ತೆರಳುತ್ತಿದ್ದ ಹಡ್ಕ ಬಡ್ಕ, ಸಿದ್ದಾಪುರ ಸಮೀಪದ ಕೂಗಳತೆಯ ದೂರದಲ್ಲಿರುವ ಹೆನ್ನಾಬೈಲು ಅರಣ್ಯ ಸೇರಿ ಬಿಟ್ಟಿದ್ದ.ಇತ್ತ ಅರಣ್ಯ ಇಲಾಖೆಗೆ ಮಾಹಿತಿಯೂ ಹೋಗಿತ್ತು ಹಾಗೆ ಜಿಪಿಎಸ್ ತಂತ್ರಜ್ಞನ ಅಳವಡಿಸಿದ್ದರಿಂದ ಸ್ಥಳೀಯರ ನೆರವಿನಿಂದ ಆನೆಯನ್ನು ಅರಸುವಲ್ಲಿ ಹೆಚ್ಚಿನ ಸಮಯವೂ ಬೇಕಾಗಿಲ್ಲ.
ಒಂಟಿ ಸಲಗ ಬಹಳ ಅಪಾಯಕಾರಿ ಎನ್ನುವ ಮಾತನ್ನು ಸುಳ್ಳಾಗಿಸಿದ್ದ ಈ ಹಡ್ಕ ಬಡ್ಕ ಆನೆ ಸುಮಾರು 150 ಕಿಮೀ ದೂರ ಒಂದೇ ಸಮನೆ ನಡೆದು ಕೊಂಡು ಬಂದರೂ ಯಾರಿಗೂ,ಯಾವುದಕ್ಕೂ ಅನಾಹುತ ಮಾಡಿರಲಿಲ್ಲ. ಆತನ ಮೈಂಡ್ ನಲ್ಲಿ ಇದ್ದಿದ್ದು ತನ್ನ ಕಾಡು ಹಾಗೂ ಪರಿವಾರ ಮಾತ್ರ. ಎಲ್ಲೂ ಕೂಡಾ ವಿಶ್ರಾಂತಿ ಪಡೆಯದೇ ಹಸಿವು,ನಿದ್ರೆ ಬಾಯಾರಿಕೆಯನ್ನೂ ಬದಿಗೆ ಒತ್ತಿ ಆತ ಹಗಳು ಇರುಳು ಸಂಚಾರ ಮಾಡಿ ಸೇರಿದ್ದು ಹೆನ್ನಾ ಬೈಲು ಕಾಡನ್ನು ಅಲ್ಲಿ ಮಾತ್ರ ಆತ ಎರಡು ದಿನ ತಂಗಿದ್ದ ಬಟ್ ರೆಸ್ಟ್ ತೆಗೆದು ಕೊಳ್ಳಲು ನಮ್ಮವರು ಬಿಟ್ಟಿಲ್ಲ! ಆನೆ ಬಂತು ಆನೆ ಎಂಬ ಕೂಗು ರಾಜ್ಯಾಧ್ಯಂತ ಹರಡಿತ್ತು. ಭಯದ ವಾತಾವರಣ ಮಡುಗಟ್ಟಿತ್ತು.
ಆನೆಯನ್ನು ಮರಳಿ ಬಂಧಿಸುವ ಯೋಜನೆ ಸಿದ್ಧವಾಯಿತು.ಮಂಗಳೂರು ಚಿಕ್ಕಮಗಳೂರು ಶಿವಮೊಗ್ಗದ ಸೇರಿದಂತೆ ವಿವಿಧ ಸ್ಥಳಗಳಿಂದ ಸುಮಾರು 150 ಅರಣ್ಯ ಇಲಾಖೆ ಅಧಿಕಾರಿಗಳು,ಪಶು ವೈದ್ಯರು,15 ಜನ ಮಾವುತರು, ಏಕಲವ್ಯ,ಭೀಮ,ಮಹೇಂದ್ರ, ಸೊಮ್ಮಣ್ಣ ,ಬಾಬಣ್ಣ,ಬಹಾದ್ದೂರ್ ಎಂಬ 6 ಸಾಕು ಆನೆಗಳ ನೇತೃತ್ವದ ಕಾರ್ಯಾಚರಣೆ ಪ್ರಾರಂಭವಾಯಿತು.ಅಂತೂ ಹಡ್ಕ ಬಡ್ಕನಿಗೆ ಪಶು ವೈದ್ಯರು ಅರವಳಿಕೆ ಚುಚ್ಚುಮದ್ದು ಕೊಟ್ಟು ಪ್ರಜ್ಞೆ ತಪ್ಪಿಸಿದರು. ಕ್ರೇನ್ ಮೂಲಕ ದೊಡ್ಡ ಟ್ರಕ್ ಗೆ ಆನೆಯನ್ನು ಲೋಡ್ ಮಾಡಿ ಶಿವಮೊಗ್ಗ ಜಿಲ್ಲೆಯ ಸಕ್ರೀಬೈಲ್ ಆನೆ ಶಿಬಿರಕ್ಕೆ ಕೊಂಡುವಯ್ದ್ ಬಿಟ್ಟರು.ಮೊದ ಮೊದಲು ಆತಂಕ ,ಭಯದಲ್ಲಿದ್ದ ಅಲ್ಲಿನ ಸ್ಥಳೀಯರು ಆನೆಯನ್ನು ಲಾರಿಗೆ ಏರಿಸಿದ್ದು ಆನೆಯನ್ನು ಹಿಡಿದು ಇಂಜೆಕ್ಷನ್ ಕೊಟ್ಟುದ್ದನ್ನು ನೋಡಿ ಕೆಲವರ ದುಃಖ ಹೇಳ ತೀರದಾಗಿತ್ತು.ಗಳ ಗಳನೆ ಅತ್ತವರು ಕೂಡ ಇದ್ದಾರೆ.ಯಾರಿಗೂ ಯಾವುದಕ್ಕೂ ಏನೂ ಉಪದ್ರವ ತೊಂದರೆ ಕೊಡದ ಆನೆಯನ್ನು ಹೊತ್ತುವೊಯ್ದು ಮತ್ತೆ ಪಂಜರದಲ್ಲಿ ಕೂಡಿ ಹಾಕುತ್ತರಲ್ಲ ಆನೆಯ ತಪ್ಪಾದರೂ ಏನು ? ಹೆಚ್ಚಿನವರ ಸವಾಲ್ ಗೆ ಜವಾಬ್ ಇಲ್ಲದಾಗಿ ತ್ತು.ಆನೆಯ ಕಣ್ಣಿರು ಧಾರಾಕಾರವಾಗಿ ಇಳಿಯುತ್ತಿತ್ತು ಆನೆ ಮಾವುತ ಅದನ್ನು ಕರ್ಚಿಪ್ ನಿಂದ ಮುಚ್ಚಿಯೂ ಬಿಟ್ಟಿದ್ದ.!! -shiವು